ಶನಿವಾರಸಂತೆ, ಫೆ. 23: ಪಟ್ಟಣದ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಮ್ಮಿಕೊಂಡ 22ನೇ ವರ್ಷದ ಪಾದಯಾತ್ರೆಗೆ ಶ್ರೀ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ಈ ವರ್ಷದ ಪಾದಯಾತ್ರೆಯಲ್ಲಿ ಶನಿವಾರಸಂತೆಯಿಂದ ಶ್ರೀ ಕ್ಷೇತ್ರದವರೆಗೆ ರಸ್ತೆ ಪಕ್ಕ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯ ವಸ್ತುಗಳನ್ನು ಪಾದಯಾತ್ರಿಗಳು ಸ್ವಚ್ಛಗೊಳಿಸುತ್ತಾ ಸಾಗುತ್ತಾರೆ.

ದೇವಾಲಯ ಆವರಣದಲ್ಲಿ ಕಸ ಆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಪಾದಯಾತ್ರೆ ಪರಿಸರ ಸ್ವಚ್ಛತೆ ಜತೆಗೆ ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಆಶಿಸಿದರು.

ರೋಟರಿ ಸಂಸ್ಥೆ ಜಿಲ್ಲಾ ಸಹಾಯಕ ರಾಜ್ಯಪಾಲ ಪಿ. ನಾಗೇಶ್ ಮಾತನಾಡಿ, ಕಾಲ್ನಡಿಗೆ ಯಾತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಪ್ರಶಂಸನೀಯ ಎಂದರು.

ಪಾದಯಾತ್ರಾ ಸಮಿತಿ ವ್ಯವಸ್ಥಾಪಕ ಬೆಂಗಳೂರು ಮುನಿರಾಜ್, ಎ.ಡಿ. ಮೋಹನ್ ಕುಮಾರ್, ರಾಜು, ಜಯಪ್ಪ, ಅಶೋಕ್, ನಂದೀಶ್, ಪ್ರಮುಖರಾದ ಎಸ್.ಪಿ. ರವಿ, ಅರವಿಂದ್, ಎಸ್.ಆರ್. ಮಧು, ಎಂ.ಎನ್. ಧರ್ಮಪ್ಪ ಉಪಸ್ಥಿತರಿದ್ದರು. ಮಹಿಳೆಯರು-ಪುರುಷರು ಸೇರಿದಂತೆ 150 ಮಂದಿ ಪಾಲ್ಗೊಂಡಿದ್ದು, ಕಾರ್ಯಕ್ರಮದ ಬಳಿಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪಾದಯಾತ್ರಿಗಳಿಗೆ ಪಟ್ಟಣದ ಈದ್ಗಾ ಮಸೀದಿ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.