ಮಡಿಕೇರಿ, ಫೆ. 23: ಆಕಸ್ಮಿಕವಾಗಿ ನಮ್ಮ ಮನಸ್ಸಿನಲ್ಲಿ ಉಂಟಾಗಲಿರುವ ಕ್ರೋಧದಿಂದ ತಪ್ಪುಗಳನ್ನು ಎಸಗುತ್ತಾ; ಅನಂತರದಲ್ಲಿ ಪಶ್ಚಾತ್ತಾಪಪಡುವ ಬದಲಿಗೆ; ಸದಾ ಕಾಲಕ್ಕೂ ದೇವರ ನಾಮಸ್ಮರಣೆಯೊಂದಿಗೆ ಕಾಯಕನಿರತ ರಾಗಿದ್ದು; ನಿತ್ಯ ಶಿವನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಆನಂದ ಕಂಡುಕೊಳ್ಳುವದು ಸಾಧ್ಯ ಎಂದು; ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಹಿರಿಯ ಸೋದರಿ ಹಾಗೂ ಸಂಚಾಲಕಿ ಗಾಯತ್ರಿ ಅವರು ಹಿತವಚನ ನುಡಿದರು.

ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ವಿದ್ಯಾಲಯದಿಂದ ಮಹಾಶಿವರಾತ್ರಿ ಪ್ರಯುಕ್ತ; ಅಲ್ಲಿನ ಬಂಧಿಗಳಿಗೆ ಸಿಹಿಯೊಂದಿಗೆ ತಿಲಕಧಾರಣೆಗೈದು ಮಾತನಾಡಿದ ಗಾಯತ್ರಿ ಅವರು; ಮನುಷ್ಯರು ಭಗವಂತನ ಮೇಲಿನ ಭಕ್ತಿ, ನಂಬಿಕೆ ಮರೆತು ಕುಕೃತ್ಯಗಳಲ್ಲಿ ತೊಡಗುತ್ತಾರೆ ಎಂದು ವಿಷಾದಿಸಿದರು. ನಿತ್ಯವೂ ಒಳ್ಳೆಯ ಚಿಂತನೆ; ಶಿವನಾಮಸ್ಮರಣೆ, ಮಿತ ಆಹಾರ, ಸಜ್ಜನರ ಸಂಘದಿಂದ ಸಮಾಜಕ್ಕೆ ಒಳಿತು ಮಾಡುವಂತಾಗಿ; ಕೆಟ್ಟದ್ದನ್ನು ಬಿಡಬೇಕೆಂದು ಅವರು ಕಾರಾಗೃಹ ಬಂಧಿಗಳಿಗೆ ತಿಳಿ ಹೇಳಿದರು.

ಮತ್ತೋರ್ವ ಸೋದರಿ ಧನಲಕ್ಷ್ಮೀ ಅವರು ಮಾತನಾಡಿ; ಈತನಕ ಮಾಡಿರುವ ತಪ್ಪುಗಳಿಗೆ ಪಶ್ಚಾತ್ತಾಪ ದೊಂದಿಗೆ; ಭವಿಷ್ಯದಲ್ಲಿ ತಪ್ಪುಗಳನ್ನು ಎಸಗದಂತೆ ಮನಸ್ಸನ್ನು ಹಿಡಿದಿಟ್ಟುಕೊಂಡು ಜೀವನದಲ್ಲಿ ಶಿವಸ್ಮರಣೆಯಿಂದ ಆನಂದ ಪಡೆಯುವಂತೆ ಮಾರ್ಗದರ್ಶನ ನೀಡಿದರು.

ಜಿಲ್ಲಾ ಕಾರಾಗೃಹದ ಪ್ರಬಾರ ಅಧೀಕ್ಷಕÀ ಧರಣೇಶ್ ಅವರು ಕಾರಾಗೃಹ ಬಂಧಿಗಳ ಮನಪರಿವರ್ತ ನೆಯ ಮೂಲಕ; ಈ ಕಾರಾಗೃಹವನ್ನು ಮನುಷ್ಯರ ಮನಪರಿವರ್ತನೆಯ ಕಾರ್ಯಾಗಾರ ಕೇಂದ್ರವಾಗಿ ರೂಪಿಸಲು ಸಂಕಲ್ಪ ದೊಂದಿಗೆ; ಎಲ್ಲಾ ವಿಚಾರಣಾಧೀನ ಮಂದಿ ಕೈಜೋಡಿಸುವಂತೆ ಕರೆ ನೀಡಿದರು.

ಜಿ.ಪಂ. ಮಾಜಿ ಸದಸ್ಯೆ ಕಾಂತಿ ಸತೀಶ್ ಮಾತನಾಡಿ; ಅಪರಾಧಗಳು ಸಮಾಜದಲ್ಲಿ ಘಟಿಸದಂತೆ ಪ್ರತಿಯೊಬ್ಬರು ಸದ್ಗುಣಗಳನ್ನು ಬೆಳೆಸಿಕೊಳ್ಳುವಂತೆಯೂ; ಭವಿಷ್ಯದಲ್ಲಿ ತಪ್ಪುಗಳು ಮರುಕಳಿಸಿದಂತೆ ಮನಪರಿವರ್ತನೆ ಹೊಂದು ವಂತೆಯೂ ಜೈಲು ಬಂಧಿಗಳಿಗೆ ಸಲಹೆಯಿತ್ತರು. ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್; ಕ್ಷುಲ್ಲಕ ವಿಷಯವಾಗಿ ತಪ್ಪೆಸಗಿ ಕಾನೂನು ಕುಣಿಕೆಯಲ್ಲಿ ಸಿಲುಕುವ ಮುನ್ನ; ಬದುಕಿನ ಹೊಣೆಯನ್ನು ಅರಿತುಕೊಳ್ಳುವಂತೆ ಸಲಹೆ ನೀಡುತ್ತಾ: ಭವಿಷ್ಯದಲ್ಲಿ ಹೊಸ ಜೀವನ ಕಂಡುಕೊಳ್ಳುವಂತೆ ತಿಳಿಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಬಳಗದ ಸೆಂದಿಲ್‍ಕುಮಾರ್, ಸುರೇಶ್‍ಕಾರಂತ್, ಹರೇಂದ್ರ, ಡಾ. ಧರಣಿ, ಕಾರಾಗೃಹ ಸಹಾಯಕ ಅಧೀಕ್ಷಕಿ ಲತಾ ಸೇರಿದಂತೆ ಸಿಬ್ಬಂದಿ ವರ್ಗದವರು ಈ ವಿನೂತನ ಮನಪರಿವರ್ತನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.