ನಾಪೋಕ್ಲು, ಫೆ. 23: ನಾಪೋಕ್ಲು-ಪಾರಾಣೆ ಸಂಪರ್ಕ ರಸ್ತೆ ಕಾಯಕಲ್ಪ ಕಾಣುವ ಬದಲು, ಮತ್ತಷ್ಟು ಹದಗೆಟ್ಟಿದೆ. ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆಗೆ ಕಾಯಕಲ್ಪ ನೀಡದಿದ್ದರೆ, ನಾಪೋಕ್ಲುವಿನಿಂದ ಪಾರಾಣೆ ಮತ್ತು ವೀರಾಜಪೇಟೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆಯಿದೆ. ಈ ಮಾರ್ಗದ ಎತ್ತುಕಡವು ಸೇತುವೆ, ದಿನಗಳನ್ನು ಎಣಿಸುತ್ತಿದೆ. ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಆರಂಭಿಸಲು ಸಮತಟ್ಟು ಮಾಡಲಾಗಿತ್ತು. ಇಂದಿಗೂ ಅದೇ ಸ್ಥಿತಿಯಲ್ಲಿದೆ.

ಎತ್ತುಕಡವು ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಪುರಾತನ ಸೇತುವೆಯ ಮಧ್ಯೆ ಅಪಾಯಕಾರಿ ಹೊಂಡವೊಂದು ಪತ್ತೆಯಾಗಿದೆ. ಬ್ರಿಟೀಷ್ ಕಾಲದ ಈ ಸೇತುವೆಗೆ ಕಾಯಕಲ್ಪ ಸಿಕ್ಕಿಲ್ಲ. ರಸ್ತೆ ವಿಸ್ತರಣೆಗೆ ನಿರ್ಧರಿಸಿದಾಗ ಈ ವ್ಯಾಪ್ತಿಯ ನಾಗರಿಕರು ಜಾಗವನ್ನು ಬಿಟ್ಟುಕೊಟ್ಟಿದ್ದರು. ಆದರೆ, ಆರಂಭ ಶೂರತ್ವ ತೋರಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆಲಸವನ್ನು ಅಷ್ಟಕ್ಕೆ ನಿಲ್ಲಿಸಿದ್ದಾರೆ.

ರಸ್ತೆಯ ಸ್ಥಿತಿಗತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ನಾಗರಿಕರು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿನ ಗ್ರಾಮ ಪಂಚಾಯಿತಿ ಕೂಡಾ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ಇತ್ತ ತುರ್ತು ಗಮನ ಹರಿಸುವಂತೆ ಇಲ್ಲಿನ ನಾಗರಿಕ ಪ್ರಮುಖರು ಹಾಗೂ ವಾಹನ ಚಾಲಕರು ಒತ್ತಾಯಿಸಿದ್ದಾರೆ.