ವೀರಾಜಪೇಟೆ, ಫೆ. 23: ರಕ್ತದಾನವು ಅತ್ಯಂತ ಶ್ರೇಷ್ಠದಾನವಾಗಿದ್ದು ಇನ್ನೊಬ್ಬರ ಜೀವ ಉಳಿಸಲು ನೆರವಾಗಲಿದೆ ಎಂದು ಕಾಫಿ ಬೆಳೆಗಾರ ನಾಣಮಂಡ ದಿವಾನ್ ಅಪ್ಪಯ್ಯ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್ ಹಾಗೂ ಮಡಿಕೇರಿಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ವಹಿಸಿದ್ದರು.
ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಮಾತನಾಡಿ, 18 ರಿಂದ 45 ವರ್ಷದವರೆಗಿನ ಆರೋಗ್ಯವಂತ ಪುರುಷರು ಮತ್ತು ಮಹಿಳೆಯರು ಮೂರು ತಿಂಗಳಿಗೊಮ್ಮೆ ನಿಗದಿತ 350 ಎಂ.ಎಲ್. ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು.
ರಾ.ಸೇ.ಯೋ. ಘಟಕದ ಅಧಿಕಾರಿಗಳಾದ ನಾಗರಾಜು ಹೆಚ್.ವಿ. ಹಾಗೂ ನೆರಪಂಡ ನಿರ್ಮಿತಾ ಮಂದಣ್ಣ ಮತ್ತು ರೆಡ್‍ಕ್ರಾಸ್ ಘಟಕದ ಸಂಯೋಜಕಿ ಲೀಲಾವತಿ ರಕ್ತದಾನ ಶಿಬಿರವನ್ನು ಸಂಘಟಿಸಿದ್ದರು. ಕಾಲೇಜಿನ ಅನೇಕ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.