ಮಡಿಕೇರಿ, ಫೆ. 22: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ತಾ. 24 ರಿಂದ ಗ್ರಾ.ಪಂ. ನೌಕರರು ಅನಿರ್ದಿಷ್ಟಾವಧಿ ಧರಣಿ ಮುಷ್ಕರ ನಡೆಸಲು ನಿರ್ಧರಿಸಿದ್ದು, ಅದರಂತೆ ಜಿಲ್ಲೆಯಲ್ಲಿ ವಿವಿಧ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ಹೋರಾಟದ ಫಲವಾಗಿ ಹಲವಾರು ಬೇಡಿಕೆಗಳನ್ನು ಈಡೇರಿಸಿ ಸರಕಾರ ಆದೇಶ ಹೊರಡಿಸಿದ್ದರೂ, ಅದನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರಲ್ಲದೆ, ನೌಕರರಿಂದ ಕೆಲಸ ಮಾಡಿಸಲು ಅಧಿಕಾರಿಗಳು ತೋರಿಸುವ ಆಸಕ್ತಿಯನ್ನು ನೌಕರರ ಸಮಸ್ಯೆಗಳ ಪರಿಹಾರಕ್ಕೆ ತೋರುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಗ್ರಾ.ಪಂ.ಗಳಲ್ಲಿ ಸುಮಾರು 65 ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಅವರ ಸಂಬಳಕ್ಕೆ ವಾರ್ಷಿಕ ರೂ. 900ರ ಅನುದಾನದ ಅಗತ್ಯವಿದೆ. ಹಿಂದಿನ ಸರಕಾರ 518 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಇನ್ನೂ 382ಕೋಟಿ ಬಾಕಿ ಉಳಿದಿದೆ. 14ನೇ ಹಣಕಾಸು ಆಯೋಗದ ಶೇ.10ರಷ್ಟನ್ನು ಸಿಬ್ಬಂದಿಗೆ ವೇತನಕ್ಕೆ ಬಳಸಿಕೊಳ್ಳಲು ಸರಕಾರ ಅನುಮೋದನೆ ನೀಡಿದ್ದರೂ, ಚುನಾಯಿತ ಸದಸ್ಯರ ಒತ್ತಡಕ್ಕೆ ಒಳಗಾಗುವ ಅಧಿಕಾರಿಗಳು ಸಿಬ್ಬಂದಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಕೆಲವು ಪಂಚಾಯಿತಿಗಳಲ್ಲಿ 5 ತಿಂಗಳುಗಳಿಂದ ವೇತನ ಪಾವತಿಯಾಗದೆ ಬಾಕಿ ಉಳಿದಿದೆ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು.
ಹೀಗೆ ಹಲವು ಸಮಸ್ಯೆಗಳ ಪರಿಹಾರಕ್ಕೆ ತಾ. 24ರಿಂದ ರಾಜ್ಯಾದ್ಯಂತ ಗ್ರಾ.ಪಂ. ನೌಕರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಿದ್ದು, ಕೊಡಗು ಜಿಲ್ಲೆಯಲ್ಲಿ ಅಂದು ಪೂರ್ವಾಹ್ನ 11.45ಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಅಪರಾಹ್ನ 3ಗಂಟೆಗೆ ಆಹಾರ ಇಲಾಖೆ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಮಡಿಕೇರಿ ತಾಲೂಕು ಖಜಾಂಚಿ ಎಂ.ಕೆ.ವಸಂತ ಉಪಸ್ಥಿತರಿದ್ದರು.