ಮಡಿಕೇರಿ, ಫೆ. 22 : ವೀರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಮಾಸಿಕ ಚಿಂತನಗೋಷ್ಠಿ ‘ಹೊಂಬೆಳಕು’ ಕಾರ್ಯಕ್ರಮದಡಿ ಮಾ.1 ರಂದು ‘ಸಹಜ ಆಹಾರ ಮತ್ತು ಜೀವನ ಶೈಲಿಯಿಂದ ಡಯಾಬಿಟಿಸ್ ನಿವಾರಣೆ’ ಕುರಿತು ಅರಿವು ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠದ ಪೀಠಾಧ್ಯಕ್ಷರು ಹಾಗೂ ಚಿಂತನಗೋಷ್ಠಿ ಸಂಚಾಲನಾ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಕಳೆದ 16 ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಪ್ರತಿ ತಿಂಗಳ ಮೊದಲ ಭಾನುವಾರ ಅರಮೇರಿ ಕಳಂಚೇರಿ ಮಠದಲ್ಲಿ ‘ಹೊಂಬೆಳಕು’ ಕಾರ್ಯಕ್ರಮದ ಮೂಲಕ ಸಮಾಜಮುಖಿ ಚಿಂತನೆಗಳಿಗೆ ಒತ್ತು ನೀಡುವ ಪ್ರಯತ್ನವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ಮಾ.1 ರಂದು ಮಧ್ಯಾಹ್ನ 3 ಗಂಟೆಗೆ ಮಠದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಧುಮೇಹದ ಬಗ್ಗೆ ಇರುವ ಪ್ರಚಲಿತ ನಂಬಿಕೆಗಳು, ತಪ್ಪು ಗ್ರಹಿಕೆಗಳ ಬಗ್ಗೆ ಪುತ್ತೂರಿನ ನಿವಾಸಿ, ಸದ್ಯ ಅಮೇರಿಕಾದಲ್ಲಿ ವೈದ್ಯ ವೃತ್ತಿಯಲ್ಲಿರುವ ಡಾ. ಸಂದೀಪ್ ನಾಯಕ್ ಮಾಹಿತಿ ನೀಡಲಿದ್ದಾರೆ ಎಂದರು.

ಡಾ.ಸಂದೀಪ್ ಎಸ್. ನಾಯಕ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಧು ಮೇಹವು ಭಾರತವನ್ನು ವ್ಯಾಪಕವಾಗಿ ಆವರಿಸಿಕೊಂಡಿದ್ದು, ಶೇ. 9 ನಗರ ವಾಸಿಗಳಲ್ಲಿ ಹಾಗೂ ಶೇ.3ರಷ್ಟು ಗ್ರಾಮೀಣ ವಾಸಿಗಳಲ್ಲಿ ಮಧುಮೇಹ ತಗುಲಿದ್ದು, ಭಾರತವು ಮಧುಮೇಹದ ಜಾಗತಿಕ ರಾಜಧಾನಿ ಎನ್ನುವ ಕುಖ್ಯಾತಿಗೆ ಒಳಗಾಗಿದೆ. 2017ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 7.2 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಹಾಗೂ 2025ನೇ ಇಸವಿಯ ವೇಳೆಗೆ ಈ ಸಂಖ್ಯೆ 13.4 ಕೋಟಿ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಅಧಿಕ ರಕ್ತದೊತ್ತಡ, ಸ್ತೂಲಕಾಯದಂತಹ ಮಾರಕ ರೋಗಗಳಿಂದಾಗಿ ಅಕಾಲಿಕ ಮರಣ, ದೃಷ್ಟಿಹೀನತೆ, ಹೃದಯ ಸಂಬಂಧಿ ಕಾಯಿಲೆಗಳು, ಪಾಶ್ರ್ವವಾಯು, ಕಿಡ್ನಿ ವೈಫಲ್ಯ, ಅಂಗಹೀನತೆ ಮುಂತಾದ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ಇದರ ಒಟ್ಟು ಪರಿಣಾಮವಾಗಿ ಭಾರತ ಮಾನವ ಸಂಪನ್ಮೂಲದ ಪ್ರಯೋಜನವನ್ನು ಪಡೆಯುವಲ್ಲಿ ನಷ್ಟವನ್ನು ಅನುಭವಿಸುತ್ತಿದೆ ಎಂದರು.

ಮಧುಮೇಹದಂತಹ ರೋಗವನ್ನು ಸಹಜ ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆಯಿಂದ ತಡೆಗಟ್ಟಲು ಸಾಧ್ಯ ಎಂಬ ಅರಿವನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವ ಅಗತ್ಯವಿದೆ ಎಂದು ಡಾ.ಸಂದೀಪ್ ಎಸ್. ನಾಯಕ್ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಹೊಂಬೆಳಕು ಸಂಚಾಲನ ಸಮಿತಿಯ ಸದಸ್ಯರಾದ ಪಿ.ಕೆ.ಅಬ್ದುಲ್ ರೆಹಮಾನ್ ಹಾಗೂ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.