ಮಡಿಕೇರಿ, ಫೆ. 22: ಮಂಗಳೂರು ವಿಶ್ವ ವಿದ್ಯಾನಿಲಯ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ವೀರಾಜಪೇಟೆ ತಾಲೂಕಿನ ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದು ವಾರದಿಂದ ನಡೆದ ಗ್ರಾಮೀಣ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಗ್ರಾಮ ಸಮೀಕ್ಷೆ, ಶಾಲಾ ಸ್ವಚ್ಛತೆ, ಬೀದಿ ನಾಟಕ ಹಾಗೂ ಜಾಥಾ ಮೂಲಕ ಜಾಗೃತಿ ಮೂಡಿಸಿದರು.

ಸಮಾರೋಪ ಸಮಾರಂಭ ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಆಶಾ ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಸಮಾಜ ಕಾರ್ಯ ಕೋರ್ಸ್ ಇತರ ಕೋರ್ಸ್‍ಗಳಿಗಿಂತ ವಿಭಿನ್ನವಾಗಿದ್ದು, ತುಂಬಾ ಉದ್ಯೋಗವಕಾಶಗಳಿದೆ. ಸಮಾಜ ಕಾರ್ಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಏಳು ದಿನಗಳಲ್ಲಿ ಹುದೂರು ಗ್ರಾಮ ಮತ್ತು ಹಳ್ಳಿಗಟ್ಟು ಆದಿವಾಸಿ ಸಮುದಾಯವನ್ನು ಅಧ್ಯಯನ ನಡೆಸಿರುವ ಅನುಭವ ಭವಿಷ್ಯಕ್ಕೆ ಸಹಕಾರಿಯಾಗಿರಲಿ. ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗಬೇಕು ಎಂದುಕೊಳ್ಳುತ್ತಿರುವ ಈ ಕಾಲದಲ್ಲಿಯೂ ಸಮಾಜದ ಬಗ್ಗೆ ಕಾಳಜಿಯಿಂದ ಸಮಾಜ ಕಾರ್ಯ ವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇತರರಿಗೂ ಮಾದರಿ ಎಂದು ಶ್ಲಾಘಿಸಿದರು.

ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಬಿ.ಶಾಹಿದಾ, ಕೆ.ಕೆ. ಮುತ್ತಮ್ಮ, ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಕೆ.ಜೆ. ರಾಬಿನ್, ಎಂ.ಎನ್. ಲೋಕೇಶ್ ಭರಣಿ, ಕೆ.ಹರಿಣಾಕ್ಷಿ, ಪ್ರಥಮ ವರ್ಷದ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳಾದ ಜಸ್ಮಿತಾ ರೋಡ್ರಿಗಸ್, ಯಶಸ್ವಿನಿ, ತೇಜಸ್ವಿ, ಇಂದ್ರಾಣಿ, ಕಿರಣ್ ಕುಮಾರ್, ಹರ್ಷದ್, ಅರವಿನ್, ಅನ್ವಿತಾ, ಜೆನ್ವಿನ್, ಪಲ್ಲವಿ, ಪೂಜಾ, ಸ್ಪರ್ಶಿತಾ, ಯಶಸ್ವಿನಿ, ಉಣ್ಣಿಮಾಯ, ಕವನ್ ಪಾಲ್ಗೊಂಡಿದ್ದರು.

ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲೆ, ಓಟದ ಸ್ಪರ್ಧೆ, ಕಾಳು ಹೆಕ್ಕುವುದು, ಸಂಗೀತ ಸ್ಪರ್ಧೆ ಆಯೋಜಿಸಿ ಗೆಲುವು ಸಾಧಿಸಿದವರಿಗೆ ಇದೇ ಸಂದರ್ಭ ಪ್ರಶಸ್ತಿ ವಿತರಣೆ ಮಾಡಲಾಯಿತು.