ಹೆಬ್ಬಾಲೆ, ಫೆ.19 : ಸಮೀಪದ ತೊರೆನೂರು ವಿರಕ್ತ ಮಠದಲ್ಲಿ ಲಿಂಗೈಕ್ಯ ಶ್ರೀ ಚರಮೂರ್ತಿ ಮಹಾಂತ ಮಹಾ ಸ್ವಾಮೀಜಿಗಳ 8ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ಗುರುಲಿಂಗ ಜಂಗಮ ದೇವರ ಪಾದಪೂಜೆ ಕಾರ್ಯಕ್ರಮಗಳನ್ನು ಬುಧವಾರ ಶ್ತದ್ಧಾಭಕ್ತಿಯಿಂದ ನಡೆಸಲಾಯಿತು. ಮಠದ ಆವರಣದಲ್ಲಿ ನಂಜನಗೂಡು ತಾಲೂಕಿನ ಸೂರಹಳ್ಳಿ ವಿರಕ್ತ ಮಠದ ನಾಗಭೂಷಣ ಸ್ವಾಮೀಜಿ ಹಾಗೂ ಶ್ರೀ ಮಲ್ಲೇಶ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೂ ಮೂಲ ಗದ್ದಿಗೆ ಪೂಜೆ, ರುದ್ರಾಭಿಷೆಕ ಹಾಗೂ ಪಾದಪೂಜೆ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವು.

ಮಹಾಂತ ಮಹಾ ಸ್ವಾಮಿಗಳ ಗದ್ದಿಗೆಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿಸಿದರು. ವಿವಿಧೆಡೆಗಳಿಂದ ಆಗಮಿಸಿದ್ದ ಮಠಾಧೀಶರು ಮಂತ್ರಪಠಣ ಮಾಡಿದರು. ಆರಾಧನಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರು ಬಿಲ್ವ ಪತ್ರೆ ಹಾಗೂ ಹೂಗಳನ್ನು ಸ್ವಾಮಿಗಳ ಗದ್ದಿಗೆಗೆ ಅರ್ಪಿಸಿ ಭಕ್ತಿ ಮೆರೆದರು.ನಂತರ ಆಗಮಿಸಿದ್ದ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಯಿತು.

ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ಪರಮಪೂಜ್ಯ ಗುರುಗಳಾದ ಶ್ರೀ ಚರಮೂರ್ತಿ ಮಹಾಂತ ಮಹಾಸ್ವಾಮಿ ಅವರ 8 ನೇ ವರ್ಷದ ವಾರ್ಷಿಕ ಆರಾಧನೆ ಮತ್ತು ಗುರುಲಿಂಗ ಜಂಗಮ ದೇವರ ಪಾದಪೂಜೆ, ರುದ್ರಾಭಿಷೆಕ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸೂರಳ್ಳಿ ವಿರಕ್ತ ಮಠದ ನಾಗಭೂಷಣ ಮಹಾಸ್ವಾಮಿಗಳ ಪಾದಪೂಜೆ ಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭ ನಂಜನಗೂಡು ತಾಲೂಕಿನ ಸೂರಹಳ್ಳಿ ಕಂತೆ ಮಾದೇಶ್ವರ ಬೆಟ್ಟ ಮಠದ ಸ್ವಾಮೀಜಿ, ಬಸವಪಟ್ಟಣ ತೋಂಟದಾರ್ಯ ಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಚಿಕ್ಕಬಳ್ಳಾಪುರದ ನಿರಂಜನ ಸ್ಚಾಮೀಜಿ, ಟಿ ನರಸೀಪುರ ತಾಲೂಕು ಸುತ್ತೂರು ಶಾಖಾ ಮಠ ಹಲವಾರು ಮಠದ ಶ್ರೀ ಷಡಾಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಅರಕಲ ಗೂಡು ಚಿಲುಮೆ ಮಠದ ಸ್ವಾಮೀಜಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ. ಶಿವಪ್ಪ,ಕಾರ್ಯದರ್ಶಿ ಶಾಂಭವಶಿವ ಮೂರ್ತಿ, ಮುಖಂಡರಾದ ಟಿ.ಎಸ್. ಚಂದ್ರಶೇಖರ್, ಮಡುವಿನ ಹಳ್ಳಿ ಯೋಗೇಶ್,ನವೀನ್, ಕಣೆನೂರು ಮಹಾದೇವಸ್ವಾಮಿ ಮತ್ತಿತರರು ಹಾಜರಿದ್ದರು.