ಮಡಿಕೇರಿ, ಫೆ.19 : ನಗರದ ದಾಸವಾಳ ರಸ್ತೆಯಲ್ಲಿರುವ ಶ್ರೀವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ತಾ. 21 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಾಲಯ ಸಮಿತಿ ಅಧ್ಯಕ್ಷ ಪಿ.ಜಿ.ಸುಕುಮಾರ್ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ ಅಂದು ಬೆಳಗ್ಗೆ 7ಗಂಟೆಗೆ ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಬೆಳಗ್ಗೆ 9ಗಂಟೆಗೆ ವೀರಭದ್ರ ಸ್ವಾಮಿಯ ಉತ್ಸವ ಮೂರ್ತಿಯ ಶೋಭಾಯಾತ್ರೆ ದೇವಾಲಯದಿಂದ ಹೊರಟು ಗಣಪತಿ ಬೀದಿ, ಬನ್ನಿಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತ, ಜೂನಿಯರ್ ಕಾಲೇಜು ರಸ್ತೆ ಮೂಲಕ ದೇವಾಲಯಕ್ಕೆ ತಲುಪಲಿದೆ ಎಂದರು.

ಮಧ್ಯಾಹ್ನ 12ಗಂಟೆಗೆ ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6ಗಂಟೆಯಿಂದ ಮರುದಿನ ಬೆಳಗ್ಗೆ 5ಗಂಟೆಯವರೆಗೆ ವಿಶೇಷ ಪೂಜೆ ಜರುಗಲಿದೆ. ಈ ನಡುವೆ ಸಂಜೆ 6ಗಂಟೆಗೆ ರಂಗಪೂಜೆ, ರಾತ್ರಿ 8ಗಂಟೆಗೆ ಸಭಾ ಕಾರ್ಯಕ್ರಮ, 10ಗಂಟೆಯಿಂದ ಬೆಳಗಿನ ಜಾವದವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ದಿನದ ಅಂಗವಾಗಿ ನ್ಯೂಸ್ 4 ಸಹಭಾಗಿತ್ವದಲ್ಲಿ ಸೋಲೋ ಹಾಗೂ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಎರಡೂ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿ ಸುವವರು ತಾ.20ರ ಸಂಜೆ 4ಗಂಟೆಯ ಒಳಗಾಗಿ ತಮ್ಮ ಹೆಸರನ್ನು 9663660869 ಅಥವಾ 9164721416 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ಸಮಿತಿಯ ಉಪಾಧ್ಯಕ್ಷ ಎಂ.ಎಲ್.ಸತೀಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಕಿಶೋರ್‍ಕುಮಾರ್, ಖಜಾಂಚಿ ಎ.ಬಿ.ಅರುಣ್, ಸಹಕಾರ್ಯದರ್ಶಿ ಎಂ.ಬಿ.ವಿಷ್ಣು ಹಾಗೂ ಸದಸ್ಯ ರಾಕೇಶ್ ಉಪಸ್ಥಿತರಿದ್ದರು.