ಕೂಡಿಗೆ, ಫೆ. 19 : ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿನ್ನೇನಹಳ್ಳಿ ಅರಣ್ಯದೊಳಗೆ ಎರಡೂವರೆ ವರ್ಷ ಪ್ರಾಯದ ಕಾಡಾನೆ ಮರಿ ಮೃತಪಟ್ಟಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ಮೃತಪಟ್ಟಿದ್ದ ಕಾಡಾನೆ ಮರಿಯ ಅಂತ್ಯಕ್ರಿಯೆ ನಡೆಸಿತು.
ಬೆಟ್ಟ ಹತ್ತಿದ್ದ ಸಂದರ್ಭ ಕಾಡಾನೆ ಮರಿಯು ಬಿದ್ದು ಎದೆಗೆ ಪೆಟ್ಟಾಗಿ ಕೆಳಗೆ ಬಿದ್ದಿದ್ದ ಮರಿಯಾನೆಯನ್ನು ಕಾಡಾನೆಗಳು ದಂತದಿಂದ ತಿವಿದು ಎಬ್ಬಿಸಲು ಪ್ರಯತ್ನಿಸಿವೆ. ಮರಿಯು ಮೃತಪಟ್ಟಿರುವುದನ್ನು ಗಮನಿಸಿದ ಹತ್ತಕ್ಕೂ ಹೆಚ್ಚು ಕಾಡಾನೆಗಳು ಎರಡು ದಿನಗಳಿಂದಲೂ ಆ ವ್ಯಾಪ್ತಿಯಲ್ಲಿಯೇ ಸುತ್ತಾಡುತ್ತಿದ್ದುದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗಮನಿಸಿದ್ದಾರೆ. ಸಿಬ್ಬಂದಿಗಳು ಕಾಡಾನೆಗಳನ್ನು ಅರಣ್ಯದೊಳಕ್ಕೆ ಓಡಿಸಲು ಮುಂದಾದ ಸಂದರ್ಭ ಕಾಡಾನೆಗಳು ಸಿಬ್ಬಂದಿಗಳನ್ನು ಬೆನ್ನಟ್ಟಿವೆ.
ನಂತರ ಮರಿ ಆನೆ ಸಾವನ್ನಪ್ಪಿರುವುದನ್ನು ಗಮನಿಸಿದÀ ಸಿಬ್ಬಂದಿ ಇಲಾಖಾಧಿಕಾರಿಗಳಿಗೆ ತಿಳಿಸಿ, ಮರಿ ಆನೆಯ ಸಮೀಪಕ್ಕೆ ತೆರಳಲು ಮುಂದಾದರೂ ಕಾಡಾನೆಗಳು ಅವಕಾಶ ನೀಡಲಿಲ್ಲ. ಬಳಿಕ ಪಟಾಕಿ ಹಾಗೂ ಗುಂಡು ಸಿಡಿಸಿ ಕಾಡಾನೆಗಳನ್ನು ಓಡಿಸಿ ಮರಿಯಾನೆಯ ಶವ ಪರೀಕ್ಷೆ ನಡೆಸಿ, ನೈಸರ್ಗಿಕವಾಗಿ ಸಾವನ್ನಪ್ಪಿರುವ ಮರಿಯಾನೆಯ ಅಂತ್ಯಕ್ರಿಯೆ ನಡೆಸಲಾಯಿತು. ಅರಣ್ಯ ಇಲಾಖೆಯ ಡಾ.ಮುಜೀದ್ ಅವರು ಶವಪರೀಕ್ಷೆ ನಡೆಸಿದರು. ಈ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮ, ಎಸಿಎಫ್ ನೆಹರು ಸೇರಿದಂತೆ ಸಿಬ್ಬಂದಿ ಇದ್ದರು.