ಗೋಣಿಕೊಪ್ಪಲು, ಫೆ. 19: ತಿತಿಮತಿ ಸಮೀಪದ ಮಾವಕಲ್ಲು ಬೆಟ್ಟದಲ್ಲಿರುವ ಮಾವಕಲ್ಲೇಶ್ವರ ದೇವಸ್ಥಾನದ ಶಿವಲಿಂಗವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಒಡೆದು ಹಾನಿಗೊಳಿಸಿದ್ದಾರೆ. ದೇವಸ್ಥಾನದಲ್ಲಿ ಶಿವಲಿಂಗ ಇರುವ ಜಾಗವನ್ನು ಅಗೆದು ಹೊಂಡ ತೋಡಿ ಶಿವಲಿಂಗವನ್ನು ಬೇರೆಡೆಗೆ ಇಟ್ಟು ಹೋಗಿದ್ದಾರೆ.ದೇವಸ್ಥಾನದಲ್ಲಿ ನಿಧಿ ಇರಬಹುದು ಎಂಬ ಶಂಕೆಯಿಂದ ಅಗೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅರಣ್ಯದೊಳಗಿರುವ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಭೀಮನ ಕಲ್ಲು, ಪಾಂಡವರ ಗುಹೆ ಮೊದಲಾದ ಪ್ರಾಚೀನ ಕಾಲದ ಚಹರೆಗಳಿವೆ.ಈ ದೇವಸ್ಥಾನಕ್ಕೆ ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ, ತಿತಿಮತಿ,ಮಾಲ್ದಾರೆ,ಸಿದ್ದಾಪುರ ಮೊದಲಾದ ಭಾಗಗಳಿಂದ ಭಕ್ತರು ತೆರಳುತ್ತಾರೆ. ಮಳೆ, ಬೆಳೆಗಾಗಿ ಪ್ರತಿ ವರ್ಷ ಮೇ, ಜೂನ್ ನಲ್ಲಿ ಕೊಡಗಿನ ಜನತೆ ಮಾವಕಲ್ಲೇಶ್ವರ ದೇವರಲ್ಲಿ ಪೂಜೆ, ಪುನಸ್ಕಾರ ಮಾಡಿ ಬೇಡುವುದಿದೆ. ಇಲ್ಲಿನ ದೇವಸ್ಥಾನದಲ್ಲಿ ಭಕ್ತರಿಗೆ ಹೂ ಬಿದ್ದರೆ ಆ ವರ್ಷ ಉತ್ತಮ ಮಳೆ ಬೆಳೆಯಾಗಲಿದೆ ಎಂಬ ನಂಬಿಕೆ ಇದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ಸಂಪರ್ಕಕ್ಕೆ ದೊರಕಲಿಲ್ಲ. ಕೆಲವು ಭಕ್ತರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
-ಎನ್.ಎನ್. ದಿನೇಶ್