ಮಡಿಕೇರಿ, ಫೆ.19 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ದೊರೆತ್ತಿದ್ದು, ಸದಸ್ಯರಾಗಿ ಮಡಿಕೇರಿಯ ಪಿ.ಎಂ.ರವಿ ಆಯ್ಕೆಯಾಗಿದ್ದಾರೆ.ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ರವಿ ಅವರನ್ನು ಆಯ್ಕೆ ಮಾಡಿದ್ದಾರೆ. ಮೊಗೇರ ಸಮಾಜದ ತಾಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ಗೌರವಾಧ್ಯಕ್ಷ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ನಿರ್ದೇಶಕ, ಮಡಿಕೇರಿ ದಸರಾ ಸಮಿತಿ ಉಪಾಧ್ಯಕ್ಷ, ತುಳವೆರ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‍ನ ಮಡಿಕೇರಿ ನಗರ ಕಾರ್ಯದರ್ಶಿ, ‘ತಿಂಗೊಲ್ದ ಬೊಲ್ಪು’ ತುಳು ಮಾಸಪತ್ರಿಕೆಯ ಸಂಪಾದಕರಾಗಿ ರವಿ ಅವರು ಸೇವೆ ಸಲ್ಲಿಸಿದ್ದಾರೆ.ಇವರ ಸೇವೆಯನ್ನು ಪರಿಗಣಿಸಿ 2012ರಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮೊಗೇರ ಸಮಾಜದ ಸಂಘಟನೆಗಾಗಿ ಸನ್ಮಾನ, ಮಂಗಳೂರಿನ ಪಿಳಿಕೊಳದಲ್ಲಿ ನಡೆದ ತುಳು ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ತುಳು ಭಾಷಿಕರ ಸಂಘಟನೆಗಾಗಿ ತುಳು ನಾಡೋಚ್ಛಯ ಪ್ರಶಸ್ತಿ ಗಳಿಸುವುದರೊಂದಿಗೆ ವಿವಿಧ ಸಂಘಟನೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ರಚನೆಯಾಗಿ 25 ವರ್ಷಗಳಾಗಿದ್ದು; ಆಗಿದ್ದು, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ದೊರೆತಿದೆ. ಮುಂದಿನ ದಿನಗಳಲ್ಲಿ ಅಕಾಡೆಮಿ ವತಿಯಿಂದ ಕೊಡಗಿನಲ್ಲೂ ತುಳು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.