ಶ್ರೀಮಂಗಲ, ಫೆ. 19: ಪೊನ್ನಂಪೇಟೆ-ಶ್ರೀಮಂಗಲ ರಾಜ್ಯ ಹೆದ್ದಾರಿಯ ಬೇಗೂರು ಗ್ರಾಮದ ಮಾಪಿಳೆತೋಡುವಿನ ಸೇತುವೆ ಸಮೀಪ ಹಲವು ವಾಹನಗಳು ಅಪಘಾತವಾಗಿರುವುದು ಹಾಗೂ ಇತ್ತೀಚೆಗೆ ಐರಾವತ ಬಸ್ ಮಗುಚಿ ಕೊಂಡಿದ್ದ ಬೆನ್ನಲ್ಲೆ ಲೋಕೋಪ ಯೋಗಿ ಇಲಾಖೆ ಎಚ್ಚೆತ್ತುಕೊಂಡು ಸುರಕ್ಷತೆ ದೃಷ್ಠಿಯಿಂದ ಹೊಸ ಸೇತುವೆ ನಿರ್ಮಿಸಲು ಮುಂದಾಗಿದೆ.

ಕಿರಿದಾಗಿರುವ ಸೇತುವೆ ಮತ್ತು ತಿರುವಿನಿಂದ ಇಲ್ಲಿ ವಾಹನಗಳು ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿದ್ದವು. ವೇಗವಾಗಿ ಬರುತ್ತಿದ್ದ ವಾಹನಗಳು ದಿಢೀರಾಗಿ ಎದುರಾಗುವ ತಿರುವಿನಲ್ಲಿ ಇರುವ ಸೇತುವೆಯಿಂದ ವೇಗ ನಿಯಂತ್ರಣವಾಗದೆ ಅಪಘಾತ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ರೂ. 70 ಲಕ್ಷ ವೆಚ್ಚದಲ್ಲಿ ಹಳೆ ಸೇತುವೆಗೆ ಹೊಂದಿಕೊಂಡಂತೆ ಹೊಸ ಸೇತುವೆ ನಿರ್ಮಿಸಲು ಮುಂದಾಗಿದ್ದು, ಮಣ್ಣಿನ ಕೆಲಸ ಆರಂಭವಾಗಿದೆ.

12 ಮೀಟರ್ ಅಗಲವಿರುವ ರಾಜ್ಯ ಹೆದ್ದಾರಿಗೆ ಹೊಂದಿಕೊಳ್ಳುವ ಗುಣಮಟ್ಟದಲ್ಲಿ ಸೇತುವೆ ನಿರ್ಮಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಇಲ್ಲಿ ಇರುವ ಹಳೆ ಸೇತುವೆ 7 ಮೀಟರ್ ಮಾತ್ರ ಅಗಲವಿದೆ.

12 ಮೀಟರ್ ಅಗಲದಲ್ಲಿ ಮಾಪಿಳೆತೋಡುವಿನಲ್ಲಿ ನೂತನ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹಳೆ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಹೊಸ ಸೇತುವೆಯನ್ನು ಹೆಚ್ಚಿನ ರಸ್ತೆ ತಿರುವು ಬರದಂತೆ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ದ್ವಿಪಥವಾದರೆ ಎರಡು ಸೇತುವೆಗಳು ಪ್ರಯೋಜನಕ್ಕೆ ಬರುತ್ತದೆ ಎಂದು ಪೊನ್ನಂಪೇಟೆ ಲೋಕೋಪಯೋಗಿ ಇಂಜಿನಿಯರ್ ಸಣ್ಣುವಂಡ ನವೀನ್ ತಿಳಿಸಿದ್ದಾರೆ.

- ಹರೀಶ್‍ಮಾದಪ್ಪ