ವೀರಾಜಪೇಟೆ, ಫೆ.20: ವೀರಾಜಪೇಟೆ ರಕ್ಷಣಾ ವೇದಿಕೆಯ ಟಿ.ಪಿ.ಅನಿಲ್ ಕುಮಾರ್ ಎಂಬುವರು ಪಟ್ಟಣ ಪಂಚಾಯಿತಿಯ ಏಳನೇ ವಾರ್ಡ್‍ನ ಸದಸ್ಯೆ ಎಂ.ಕೆ. ದೇಚಮ್ಮ ಅವರ ವಿರುದ್ದ ವಾರ್ಡ್‍ನ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಏಳನೇ ವಾರ್ಡ್‍ನ ಸಾರ್ವಜನಿಕರು ನೀಡಿದ ದೂರಿನ ಮೇರೆ ಅವರ ಪರವಾಗಿ ಅವರನ್ನು ವಿಚಾರಿಸಿದಾಗ ಉತ್ತಮ ಪ್ರತಿಕ್ರಿಯೆ ನೀಡಿಲ್ಲ. ಅವರನ್ನು ನಗರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂದು ನಗರ ಪೊಲೀಸರಿಗೆ ವಾರ್ಡ್‍ನ ಸಾರ್ವಜನಿಕರು ಸಹಿ ಮಾಡಿದ ದೂರನ್ನು ರಕ್ಷಣಾ ವೇದಿಕೆಯ ಲೆಟರ್‍ಹೆಡ್‍ನಲ್ಲಿ ನೀಡಿದ್ದರು.

ವಾರ್ಡ್‍ನ ಸಾರ್ವಜನಿಕರಿಂದ ಪ್ರತಿ ದೂರು

ಟಿ.ಪಿ.ಅನಿಲ್ ಕುಮಾರ್ ದೂರಿಗೆ ಸಂಬಂಧಿಸಿದಂತೆ ಏಳನೇ ವಾರ್ಡ್‍ನ ಸುಮಾರು 30ಮಂದಿ ನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ಏಳನೇ ವಾರ್ಡ್‍ನ ಸಮಸ್ಯೆಗಳ ಕುರಿತು ರಕ್ಷಣಾ ವೇದಿಕೆ ಸಂಘಟನೆಗೆ ಯಾವುದೇ ದೂರು ನೀಡಿಲ್ಲ. ಸಾರ್ವಜನಿಕರು ಸಹಿ ಮಾಡದಿದ್ದರೂ ನಮ್ಮ ಹೆಸರುಗಳ ಸಹಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಏಳನೇ ವಾರ್ಡ್‍ನ ತಡೆಗೋಡೆಗಾಗಿ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಶಿಫಾರಸಿನ ಮೇರೆ ಸರಕಾರದಿಂದ ಈಗಾಗಲೇ ಸುಮಾರು ರೂ 45,50,000 ಬಿಡುಗಡೆಯಾಗಿದೆ. ಸಧ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಈಗಿನ ಸದಸ್ಯೆ ಎಂ.ಕೆ.ದೇಚಮ್ಮ ಮನವರಿಕೆ ಮಾಡಿದ್ದಾರೆ.

ಈ ಸಂಬಂಧದಲ್ಲಿ ಶಾಸಕರು ಏಳನೇ ವಾರ್ಡ್‍ನ ಸಾರ್ವಜನಿಕರಿಗೆ ವಾರ್ಡ್‍ನ ಎಲ್ಲ ಸಮಸ್ಯೆಗಳು ಹಾಗೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ತಡೆಗೋಡೆಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ತಡೆಗೋಡೆ ಜಖಂಗೊಂಡ ಜಾಗವನ್ನು ಪಟ್ಟಣ ಪಂಚಾಯಿತಿ ಸದಸ್ಯೆ ದೇಚಮ್ಮ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಶಾಸಕರು ಖುದ್ದು ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಪರಿಹಾರವನ್ನು ನೀಡಿದಲ್ಲದೆ ತಡೆಗೋಡೆಯನ್ನು ಸಧ್ಯದಲ್ಲಿಯೇ ನಿರ್ಮಿಸುವುದಾಗಿ ಭರವಸೆಯನ್ನು ನೀಡಿರುವುದನ್ನು ಸಾಕ್ಷ್ಯಾಧಾರ ಸಮೇತ ಪೊಲೀಸರಿಗೆ ತಿಳಿಸಿದ್ದು ಏಳನೇ ವಾರ್ಡ್‍ನ ನಿವಾಸಿಗಳಾದ ನಾವುಗಳು ಯಾವುದೇ ರೀತಿಯಲ್ಲಿ ಅನಿಲ್ ಕುಮಾರ್‍ಗೆ ದೂರು ನೀಡಿಲ್ಲ. ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ಸಬ್ ಇನ್ಸ್‍ಪೆಕ್ಟರ್ ಮರಿಸ್ವಾಮಿಗೆ ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯೆ ದೇಚಮ್ಮ ಅವರ ವಿರುದ್ಧ ಅನಿಲ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ ಸಂಬಂಧದಲ್ಲಿ ದೇಚಮ್ಮ ಸೇರಿದಂತೆ 9ಮಂದಿ ಸದಸ್ಯರುಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದ್ದರು.

ಸಬ್ ಇನ್ಸ್‍ಪೆಕ್ಟರ್ ಪ್ರತಿಕ್ರಿಯೆ

ಸಂಘಟನೆ ಹಾಗೂ ಏಳನೇ ವಾರ್ಡ್‍ನ ಸಾರ್ವಜನಿಕರು ನೀಡಿರುವ ದೂರುಗಳು ಪೊಲೀಸ್ ಠಾಣೆಗೆ ಸಂಬಂಧಿಸಿಲ್ಲ ಎರಡು ಕಡೆಯವರಿಗೂ ಇದರಿಂದ ಸಮಾಧಾನವಾಗದಿದ್ದರೆ. ನ್ಯಾಯಾಲಯದ ತೀರ್ಮಾನದಲ್ಲಿ ಇದು ಅಂತ್ಯ ಕಾಣಬೇಕು. ಪಟ್ಟಣ ಪಂಚಾಯಿತಿ ಸದಸ್ಯರುಗಳಿಗೆ ಯಾರೇ ಆಗಲಿ ಎಲ್ಲ ರೀತಿಯಿಂದಲೂ ಗೌರವ ಕೊಡಬೇಕು. ಅವರುಗಳು ಸಾರ್ವಜನಿಕರಿಂದ ಆಯ್ಕೆಯಾದವರು..ವಾರ್ಡ್‍ನ ಜನಪರ ಕೆಲಸ, ಅಭಿವೃದ್ಧಿಗಾಗಿ ವಾರ್ಡ್‍ನ ಪ್ರತಿಯೊಬ್ಬರು ಸದಸ್ಯರೊಂದಿಗೆ ಸಹಕರಿಸುವಂತಾಗಬೇಕು ಎಂದು ಸಲಹೆ ನೀಡಿ ಎರಡು ಕಡೆಯವರ ಪೊಲೀಸ್ ದೂರಿಗೆ ಅಂತ್ಯ ಹಾಡಿದರು.