ಗೋಣಿಕೊಪ್ಪಲು, ಫೆ. 20: ಗೋಣಿಕೊಪ್ಪ ದಿ. ಮರ್ಚೆಂಟ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ 2020 -2025ನೇ ಸಾಲಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ 3ನೇ ಅವಧಿಗೆ ಅಧ್ಯಕ್ಷರಾಗಿ ಕಿರಿಯಮಾಡ ಅರುಣ್ ಪೂಣಚ್ಚ ಹಾಗೂ ಉಪಾಧ್ಯಕ್ಷರಾಗಿ ಕಡೇಮಾಡ ಸುನೀಲ್ ಮಾದಪ್ಪ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಮಡಿಕೇರಿಯ ಚುನಾವಣಾ ಅಧಿಕಾರಿ ಪಿ.ಬಿ.ಮೋಹನ್ ಕುಮಾರ್ ಹಾಗೂ ಬ್ಯಾಂಕಿನ ಕಾರ್ಯನಿರ್ವಾಹಣಾಧಿ ಕಾರಿ ಬಿ.ಈ. ಕಿರಣ್ ನಡೆಸಿಕೊಟ್ಟರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅರುಣ್ ಪೂಣಚ್ಚ, ಬ್ಯಾಂಕಿನ ಸದಸ್ಯರು ನಮ್ಮ ಮೇಲೆ ನಂಬಿಕೆಯಿಟ್ಟು ಮೂರನೇ ಅವಧಿಗೆ ಅಧಿಕಾರ ನೀಡಿದ್ದಾರೆ. ಬ್ಯಾಂಕ್ ಮತ್ತಷ್ಟು ಪ್ರಗತಿ ಸಾಧಿಸಲು ನಿರ್ದೇಶಕರ ಸಹಕಾರ ಅವಶ್ಯವಿದೆ. ಬ್ಯಾಂಕನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆಂದರು. ಉಪಾಧ್ಯಕ್ಷರಾಗಿ 3ನೇ ಅವಧಿಗೆ ಆಯ್ಕೆಗೊಂಡ ಕಡೇಮಾಡ ಸುನಿಲ್ ಮಾದಪ್ಪ ಮಾತನಾಡಿ; ಅಧಿಕಾರದ ನಂತರ ನಮ್ಮ ಜವಾಬ್ದಾರಿ ದುಪ್ಪಟ್ಟಾಗಿದೆ. ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಸರಳ ಸದಸ್ಯರ ಸಲಹೆ ಸಹಕಾರ ಪಡೆದು ಹಮ್ಮಿಕೊಳ್ಳೋಣವೆಂದರು. ಹಿರಿಯ ನಿರ್ದೇಶಕರಾದ ಚೇಂದಂಡ ಸುಮಿ ಸುಬ್ಬಯ್ಯ, ಎ.ಜೆ. ಬಾಬು, ಕೆ.ಬಿ. ಗಣಪತಿ, ಸಿ.ಡಿ. ಮಾದಪ್ಪ, ಸೇರಿದಂತೆ ಇನ್ನಿತರರು ಮಾತನಾಡಿದರು.

ನಿರ್ದೇಶಕರಾದ ನಾಮೇರ (ರವಿ) ದೇವಯ್ಯ, ಚೆಪ್ಪುಡೀರ ದ್ಯಾನ್ ಸುಬ್ಬಯ್ಯ, ಬಿ.ಎನ್.ಪ್ರಕಾಶ್, ಪ್ರಶಾಂತ್ ಕುಮಾರ್ ಕೆ.ಪಿ., ಬಾಬು, ಎ.ಜೆ. ರಾಜಶೇಖರ್ (ಶೇಖರ್), ಆಲೀರ. ಕೆ. ಉಮ್ಮರ್, ಕುಲ್ಲೇಟೀರ ಪ್ರವಿಮೊಣ್ಣಪ್ಪ, ಮುರುಗನ್ ಹೆಚ್.ಎನ್., ಪ್ರತಾಪ್, ಸೇರಿದಂತೆ ಸೊಸೈಟಿಯ ಕಾರ್ಯ ನಿರ್ವಾಹಣಾಧಿಕಾರಿಗಳು, ಬ್ಯಾಂಕಿನ ಸಿಬ್ಬಂದಿಗಳು, ಪಿಗ್ಮಿ ಸಂಗ್ರಾಹಕರು ಹಾಜರಿದ್ದರು.