ಸೋಮವಾರಪೇಟೆ, ಫೆ. 20: ಕೊಡ್ಲಿಪೇಟೆ-ಸೋಮವಾರಪೇಟೆ-ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿ ಯೇಷನ್‍ನ ಪದಾಧಿಕಾರಿ ಗಳು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೊಡ್ಲಿಪೇಟೆಯಿಂದ ಸೋಮ ವಾರಪೇಟೆ ಮಾರ್ಗವಾಗಿ ಮಡಿಕೇರಿ, ವೀರಾಜಪೇಟೆ-ಕುಟ್ಟ ಸಂಪರ್ಕ ರಸ್ತೆಯು ಅತ್ಯಂತ ಕಿರಿದಾಗಿದ್ದು, ವಾಹನ ಚಾಲಕರಿಗೆ ಸಮಸ್ಯೆ ಯಾಗುತ್ತಿದೆ. ಇದರೊಂದಿಗೆ ರಸ್ತೆಯೂ ಸಮರ್ಪಕ ನಿರ್ವಹಣೆ ಯಿಲ್ಲದೇ ಸಂಚಾರಕ್ಕೆ ತೊಡಕಾಗಿದ್ದು, ಬಜೆಟ್ ನಲ್ಲಿ ಈ ರಸ್ತೆಗೆ ಹೆಚ್ಚಿನ ಅನುದಾನ ಮೀಸಲಿಟ್ಟು, ಮೇಲ್ದರ್ಜೆ ಗೇರಿಸಲು ಕ್ರಮ ಕೈಗೊಳ್ಳಬೇಕಾಗಿ ಸಂಸ್ಥೆಯ ಪದಾಧಿಕಾರಿಗಳು ಶಾಸಕರನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಶಾಸಕರನ್ನು ಭೇಟಿ ಮಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಪದಾಧಿಕಾರಿಗಳಾದ ಶ್ರೀನಿವಾಸ್, ರಕ್ಷಿತ್, ಸ್ವಾಗತ್, ಶ್ರೀಜಿತ್, ಹೇಮಂತ್ ಸೇರಿದಂತೆ ಇತರರು ಮನವಿ ಸಲ್ಲಿಸಿ, ರಸ್ತೆ ಕಾಮಗಾರಿಯ ಬಗ್ಗೆ ಶಾಸಕರ ಗಮನ ಸೆಳೆದಿದ್ದಾರೆ.