ಮಡಿಕೇರಿ, ಫೆ. 19: ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಈರ್ವರು ಆರೋಪಿಗಳಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಈ ಹಿಂದೆ ಪೊಲೀಸ್ ಉಪನಿರೀಕ್ಷರಾಗಿದ್ದ ಸಂತೋಷ್ ಕಶ್ಯಪ್ ಅವರು ತಾ. 7.7.2016 ರಂದು ರಾತ್ರಿ 3 ಗಂಟೆಗೆ ಇಲಾಖಾ ಜೀಪಿನಲ್ಲಿ ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಸುದರ್ಶನ ವೃತ್ತದ ಕಡೆ ಹೋಗುತ್ತಿದ್ದಾಗ ಮಡಿಕೇರಿಯ ಶಾಂತಿ ಚರ್ಚ್‍ನ ಮುಂಭಾಗ ಆಟೋ ರಿಕ್ಷಾ (ಕೆ.ಎ. 12 9773) ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದನ್ನು ಗಮನಿಸಿದ್ದಾರೆ. ನಂಬರ್ ಇಲ್ಲದ್ದರಿಂದ ಆಟೋವನ್ನು ಪರಿಶೀಲಿಸಲು ಹೋದಾಗ ರಿಕ್ಷಾದ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಓಡಿ ಹೋಗಿದ್ದಾನೆ.ನಂತರ ಆಟೋವನ್ನು ಪರಿಶೀಲಿಸಿದಾಗ ಆಟೋ ರಿಕ್ಷಾದಲ್ಲಿ ಗಾಂಜಾ ಪ್ಯಾಕೆಟ್‍ಗಳು ಇದ್ದುದ್ದರಿಂದ ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿಯವರನ್ನು ಮತ್ತು ಪಂಚಾಯಿತಿದಾರರನ್ನು ಬರಮಾಡಿಕೊಂಡು ಮಹಜರು ಮಾಡಿ ರೂ. 8000 ಮೌಲ್ಯದ 161.790 ಗ್ರಾಂ. ತೂಕದ 28 ಗಾಂಜಾ ಪ್ಯಾಕೇಟ್‍ಗಳನ್ನು, ಕಂದು ಬಣ್ಣದ ಬ್ಯಾಗನ್ನು, ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸುಂದರ್ ರಾಜ್ ಹಾಗೂ ಓಡಿ ಹೋದ ಸವೀನ್ ಜಿ.ಜಿ. ಅವರ ವಿರುದ್ಧ ಕಲಂ 8(ಬಿ) 20 (ಸಿ) ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆಯು ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯ ಮಡಿಕೇರಿಯಲ್ಲಿ ಜರುಗಿದ್ದು; ಆರೋಪಿತರಾದ ಸುಂದರ್ ರಾಜು ವಿ.ವಿ. ಮತ್ತು ಸವೀನ್ ಜಿ.ಜಿ. ಎಂಬವರು ಶಿಕ್ಷಾರ್ಹ ಅಪರಾಧ ಎಸಗಿರುವದು ಸಾಭೀತಾದ ಮೇರೆಗೆ ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ. ಮನು ಅವರು ಅಪರಾಧಕ್ಕಾಗಿ ಆರು ತಿಂಗಳು ಕಠಿಣ ಸಜೆ ಹಾಗೂ ತಲಾ ರೂ. 5000 ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಪ್ರಕರಣದ ವಿಚಾರಣೆಯನ್ನು ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್. ಸಂತೋಷ್ ನಡೆಸಿರುತ್ತಾರೆ.