ಶ್ರೀಮಂಗಲ, ಫೆ. 19: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಕೊಡಗು ಬೆಳೆಗಾರರ ಒಕ್ಕೂಟ (ಕೆಜಿಎಫ್) ಮತ್ತು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ (ಸಿಪಿಎ) ನಿಯೋಗ ಬೆಂಗಳೂರಿನಲ್ಲಿ ಭೇಟಿ ಮಾಡಿ ಬೆಳೆಗಾರರ ಬೇಡಿಕೆ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಸೇರಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದೆ.
ಬೆಂಗಳೂರು ವಿಧಾನ ಸೌಧದಲ್ಲಿ ಭೇಟಿ ಮಾಡಿದ ನಿಯೋಗ ಹವಮಾನ ವೈಪರೀತ್ಯ, ಬೆಲೆಕುಸಿತ, ಉತ್ಪಾದನ ವೆಚ್ಚ ಹೆಚ್ಚಳ, ಹಣದುಬ್ಬರ, ಇತ್ಯಾದಿ ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಕಾಫಿ ಬೆಳೆಗಾರರ ನೆರವಿಗೆ ಸರಕಾರ ಬರಬೇಕೆಂದು ಶಾಸಕ ಅಪ್ಪಚ್ಚುರಂಜನ್ ಮುಖ್ಯಮಂತ್ರಿಗೆ ಮನವಿ ಮಾಡಿದರು.ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮತ್ತು ಬೇರೆ ಬೆಳೆಗಳಿಗೆ ನೀಡುವಂತೆ ಕಾಫಿ ಬೆಳೆಗಾರರಿಗೆ 10 ಹೆಚ್‍ಪಿ ವರೆಗಿನ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದು, ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಸಿಎಂಸಿ) ವ್ಯಾಪ್ತಿಯಲ್ಲಿ ಬರುವ ಕಾಳುಮೆಣಸಿಗೆ ಸೆಸ್ ರದ್ದುಗೊಳಿಸಬೇಕು. ಈಗ ಬೆಳೆಗಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರ ಸಂಘದಿಂದ ದೊರೆಯುತ್ತಿರುವ ಸಾಲದ ಮಿತಿ ರೂ. 3 ಲಕ್ಷದಿಂದ ಗರಿಷ್ಠ ಪ್ರಮಾಣಕ್ಕೆ ಏರಿಸುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲದೊಂದಿಗೆ ಮಧ್ಯಮಾವದಿ ಸಾಲವನ್ನು ನೀಡುವ ಕುರಿತು ಗಮನ ಸೆಳೆಯಿತು.ಈ ಸಾಲವನ್ನು ನಬಾರ್ಡ್‍ನಿಂದ ನಿಗದಿಪಡಿಸಿರುವ ಎಲ್ಲಾ ಕೃಷಿ ಚಟುವಟಿಕೆಗಳಿಗೆ ಮಧ್ಯಮಾವಧಿ ಸಾಲವಾಗಿ ವಿಸ್ತರಿಸಬೇಕಾಗಿ ನಿಯೋಗ ಮನವಿ ಮಾಡಿದೆ. ಈ ಸಾಲದ ಮಿತಿ ಹೆಚ್ಚಳದಿಂದ ಕೇಂದ್ರ ಸರಕಾರದ ರಾಷ್ಟ್ರೀಯ ನೀತಿಯಂತೆ ಕೃಷಿ ಆದಾಯ ದ್ವಿಗುಣಗೊಳಿಸಲು ಹಾಗೆಯೇ ರಾಜ್ಯದ ಆರ್ಥಿಕ ವ್ಯವಸ್ಥೆ ಉತ್ತಮಗೊಳ್ಳಲು ಸಹಕಾರಿ ಯಾಗಲಿದೆ ಎಂದು ನಿಯೋಗ ಮುಖ್ಯಮಂತ್ರಿ ಯವರಿಗೆ ಮನವರಿಕೆ ಮಾಡಿತು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈ ಗೊಳ್ಳುವ ಭರವಸೆಯನ್ನು ಮುಖ್ಯ ಮಂತ್ರಿ ಈ ಸಂದರ್ಭ ವ್ಯಕ್ತಪಡಿಸಿದರು.ಇದೇ ಸಂದರ್ಭ ಸಹಕಾರ ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿ ನಿಯೋಗ ಮನವಿ ಸಲ್ಲಿಸಿತು. ರಾಜ್ಯ ಸರಕಾರದ ಹೆಚ್ಚುವರಿ ಹಣಕಾಸು ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್ ಮತ್ತು ಎಪಿಎಂಸಿ ನಿರ್ದೇಶಕ ಕರಿಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿತು. ನಿಯೋಗದಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲೀರ ಹರೀಶ್ ಅಪ್ಪಯ್ಯ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‍ನ ತೇಲಪಂಡ ಪ್ರದೀಪ್ ಪೂವಯ್ಯ ಮತ್ತು ನಂದಾ ಬೆಳ್ಯಪ್ಪ ಇದ್ದರು.