ಮಡಿಕೇರಿ, ಫೆ. 20: ಜೀವನದಲ್ಲಿ ಪ್ರತಿಯೊಬ್ಬರು ಇರುವಷ್ಟರಲ್ಲಿ ತೃಪ್ತಿ ಕಂಡುಕೊಳ್ಳುವ ಮೂಲಕ; ಅತಿಯಾಸೆಗೆ ಗುರಿಯಾಗಿ ಸಾಲದ ಶೂಲಕ್ಕೆ ಸಿಲುಕದೆ; ಕವಿ ಸರ್ವಜ್ಞ ಆಶಯದಂತೆ ಬದುಕುವದು ಒಳಿತು ಎಂದು ಉಪವಿಭಾಗಾಧಿಕಾರಿ ಟಿ. ಜವರೇಗೌಡ ಅವರು ಕಿವಿಮಾತು ಹೇಳಿದರು ನಗರದ ದೇವರಾಜ ಅರಸು ಭವನದಲ್ಲಿ ಇಂದು ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿ ಹಾಗೂ ವಚನಕಾರ ಸರ್ವಜ್ಞ ನುಡಿದಂತೆ; ಅಗತ್ಯಕ್ಕೆ ತಕ್ಕ ಸಂಪತ್ತು; ವಾಸಕ್ಕೊಂದು ಮನೆ ಹಾಗೂ ಪತಿಯ ಬದುಕಿಗೆ ಸಹಕರಿಸುವ ಮಡದಿ ಲಭಿಸಿದರೆ ಬೇರೆ ಸ್ವರ್ಗ ಸುಖ ಅಪ್ರಸ್ತುತ ಎಂದ ಅವರು; ಸರ್ವಜ್ಞನ ತ್ರಿಪದಿ ಸಾಲುಗಳನ್ನು ಉಲ್ಲೇಖಿಸಿ ದರು. ಸರ್ವಜ್ಞ ಸರಳ ರೀತಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ; ಪ್ರತಿಯೊಬ್ಬರು ‘ನಾನು’ ಎಂಬ ಗರ್ವದಿಂದ ಹೊರಬಂದು; ಸರ್ವರೊಳಗೆ ಬೆರೆತು ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಾ; ಇತರರಿಗಾಗಿ ಬಾಳುವದರಲ್ಲಿ ಶ್ರೇಯಸ್ಸು ಲಭಿಸಲಿದೆ ಎಂದು ಜವರೇಗೌಡ ನೆನಪಿಸಿದರು. ಜೀವನದಲ್ಲಿ ಸಾಲ ಮಾಡಿ; ಬಳಿಕ ತೀರಿಸಲಾರದೆ ಮರುಗುವದು ಯಾರಿಗೂ ಶೋಭೆಯಲ್ಲ ಎಂದು ಸರ್ವಜ್ಞ 16ನೇ ಶತಮಾನದಲ್ಲಿ ನುಡಿದಿರುವದು ಅರಿತುಕೊಂಡರೆ ಪ್ರತಿಯೊಬ್ಬರಿಗೆ ಒಳಿತು ಎಂಬದಾಗಿ ತಿಳಿಹೇಳಿದರು.
‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ಸರ್ವಜ್ಞ ಅವರು ತ್ರಿಪದಿಗಳ ಮುಖಾಂತರ ನೀಡಿರುವ ಮೌಲ್ಯಯುತ ಸಂದೇಶ ಎಲ್ಲಾ ಕಾಲಕ್ಕೂ ಸ್ತುತ್ಯರ್ಹವೆಂದು ತಮ್ಮ ಉಪನ್ಯಾಸದೊಂದಿಗೆ ನೆನಪಿಸಿದರು. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ರಾಜ್ಯ ಸರಕಾರದಿಂದ 30 ಗಣ್ಯರ ಜಯಂತಿಯೊಂದಿಗೆ ಸಮಾಜಕ್ಕೆ ಸಹಬಾಳ್ವೆಯ ಸಂದೇಶ ನೀಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಬಾರ ಸಮಾಜದ ಅಧ್ಯಕ್ಷ ಕೆ.ಡಿ. ನಾಣಯ್ಯ ಮಾತನಾಡಿ; ತಮ್ಮ ಸಮಾಜಕ್ಕೆ ಸರಕಾರದಿಂದ ಅನೇಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳ ಸಹಕಾರ ಪ್ರಶಂಸನೀಯ ಎಂದು ಮೆಲುಕು ಹಾಕಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಉಪನಿರ್ದೇಶಕಿ ದರ್ಶನ್ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಲಿಂಗರಾಜು, ಪುಟ್ಟರಾಜು, ವೆಂಕ ಟೇಶ್, ಚಿನ್ನಸ್ವಾಮಿ, ತಹಶೀಲ್ದಾರ್ ಮಹೇಶ್ ಮೊದ ಲಾದವರು ಉಪಸ್ಥಿತರಿದ್ದರು. ಸಮಾಜದ ಪ್ರತಿನಿಧಿಗಳು, ವಿವಿಧ ಇಲಾಖೆಯ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.