ಮಡಿಕೇರಿ, ಫೆ. 20: ಉನ್ನತ ವ್ಯಾಸಂಗದಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡಬಹುದು ಎನ್ನುವುದರತ್ತ ಬೆಳಕು ಚೆಲ್ಲುವ ಪ್ರಯತ್ನವಾಗಿ ತಾ. 22ರಂದು ನಗರದಲ್ಲಿ ‘ಭವಿಷ್ಯದ ಆಯಾಮದಲ್ಲಿ ಉನ್ನತ ಶಿಕ್ಷಣ’ ವಿಷಯದ ಕುರಿತು ಅಂತರ್ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪೆÇ್ರ. ವೈ. ಚಿತ್ರ, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿದ್ದು, ಅದನ್ನು ಶಿಕ್ಷಣದಲ್ಲಿ ಹೇಗೆ ಅಳವಡಿಸಿಕೊಳ್ಳ ಬಹುದು ಎಂಬದರ ಕುರಿತು ಉಪನ್ಯಾಸಕರಿಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಸಮಿತಿ ಮತ್ತು ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಸಹಯೋಗದಲ್ಲಿ ನಗರದ ಕೂರ್ಗ್ ಇಂಟರ್‍ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಬೆಳಗ್ಗೆ 8.30ಕ್ಕೆ ಸಮ್ಮೇಳನ ಆರಂಭಗೊಳ್ಳಲಿ ದೆಯೆಂದು ತಿಳಿಸಿದರು.
ಸಮ್ಮೇಳನದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜರ್ಮನಿಯ ಸಂವಹನ ಮತ್ತು ಸಮಾಜ ವಿಜ್ಞಾನ ವಿಭಾಗದ ಪ್ರೊಫೆಸರ್ ಡಾ. ವಿಲಿಯಂ ರಾಬರ್ಟ್ ಡಿಸಿಲ್ವ, ಇತಿಹಾಸಕಾರ ಡಾ. ಡೇವಿಡ್ ಬಾಂಡ್, ಇಂಗ್ಲೆಂಡ್‍ನ ಉನ್ನತ ಶಿಕ್ಷಣ ಸಮಿತಿಯ ನಿರ್ದೇಶಕ ಪ್ರೊ. ಸೂರ್ಯ ನಾರಾಯಣ್, ಡಾ. ಶ್ರೀನಿವಾಸ್ ಕುಮಾರ್, ನ್ಯಾಕ್‍ನ ರಾಜ್ಯ ಸಂಯೋಜಕ ಡಾ.ಸಿದ್ದಲಿಂಗ ಸ್ವಾಮಿ, ಮಂಗಳೂರು ಸಹ್ಯಾದ್ರಿ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ವಿಶಾಲ್ ಸಮರ್ಥ್ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನ ಪ್ರೊ. ಅನಿತ ಬ್ರಗ್ಸ್ ಪಾಲ್ಗೊಳ್ಳಲಿ ದ್ದಾರೆಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕಿ ಡಾ. ಅನುಪಮ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿವಿಧ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ಅದನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಳಕೆಯಾಗಬೇಕಾಗಿದೆ ಎಂದರು. ಸಮ್ಮೇಳನಕ್ಕೆ 70ಕ್ಕೂ ಹೆಚ್ಚು ಸಂಶೋಧಕರು ಆಗಮಿಸಲಿದ್ದು, ವಿವಿಧ ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ದಯಾನಂದ, ಪ್ರಕಾಶ್, ಮುತ್ತಮ್ಮ ಹಾಗೂ ಶಶಿಧರ್ ಉಪಸ್ಥಿತರಿದ್ದರು.