ಮಡಿಕೇರಿ, ಫೆ. 20: ಮಹಾಶಿವರಾತ್ರಿ ಪ್ರಯುಕ್ತ ತಾ. 21 ರಂದು (ಇಂದು) ನಾಡಿನೆಲ್ಲೆಡೆ ಕೊಡಗಿನ ಪ್ರಮುಖ ಶಿವಾಲಯಗಳಲ್ಲಿ ಮಹಾದೇವನನ್ನು ವಿಶೇಷ ಪೂಜೆಯೊಂದಿಗೆ ನಮಿಸಲು ಸಿದ್ಧತೆ ನಡೆದಿದೆ. ಉತ್ತರ ಕೊಡಗಿನ ಪುಷ್ಪಗಿರಿ ತಪ್ಪಲುವಿನ ಶ್ರೀ ಶಾಂತಮಲ್ಲಿಕಾರ್ಜುಮ ಸನ್ನಿಧಿಯಿಂದ ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲಿನ ಇರ್ಪು ಶ್ರೀ ರಾಮೇಶ್ವರ ಕ್ಷೇತ್ರ ಆದಿಯಾಗಿ ತಲಕಾವೇರಿ, ಭಾಗಮಂಡಲ ಸೇರಿದಂತೆ ಎಲ್ಲೆಡೆ ಮಹಾಶಿವರಾತ್ರಿ ಉತ್ಸವದ ತಯಾರಿ ಗೋಚರಿಸಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯ ದಾಸವಾಳ ರಸ್ತೆಯಲ್ಲಿರುವ ಬ್ರಹ್ಮಾಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ ಅಮರನಾಥೇಶ್ವರ ಶಿವಲಿಂಗ ದರ್ಶನ ತಾ. 21 ಮತ್ತು 22 ರಂದು ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಗೆ ಬೆಳಿಗ್ಗೆ 10 . ರಿಂದ ರಾತ್ರಿ 9ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಡಿಕೇರಿಯ ಶ್ರೀ ಓಂಕಾರೇಶ್ವರ, ಉಕ್ಕುಡ ಶ್ರೀ ರಾಜರಾಜೇಶ್ವರಿ ಸನ್ನಿಧಿ, ದಾಸವಾಳದ ವೀರಭದ್ರ ಮುನೀಶ್ವರ, ಸುದರ್ಶನ್ ವೃತ್ತ ಬಳಿಯ ಮುನೀಶ್ವರ ದೇವಾಲಯ ಮುಂತಾದೆಡೆ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರದಲ್ಲಿಯೂ ಶಿವನ ಆರಾಧನೆಯೊಂದಿಗೆ ವಿಶೇಷ ದೈವಿಕ ಕೈಂಕರ್ಯಗಳನ್ನು ಆಯೋಜಿಸಲಾಗಿದೆ. ಅನೇಕ ಶಿವಾಲಯಗಳಲ್ಲಿ ಸದ್ಬಕ್ತರಿಗೆ ಪೂಜೆ, ಹೋಮ, ಹವನಗಳಲ್ಲಿ ಬಾಗಿಯಾಗಲು ಅವಕಾಶದೊಂದಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಎಳನೀರು ಅಭಿಷೇಕ ಸೇವೆಗಳನ್ನು ಕಲ್ಪಿಸಲಾಗಿದೆ.

ಇಲ್ಲಿಗೆ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯ, ಬಿಳಿಗೇರಿಯ ಶ್ರೀ ಅರ್ಧನಾರೀಶ್ವರ, ಪಾಲೂರು ಶ್ರೀ ಮಹಾಲಿಂಗೇಶ್ವರ, ಪೇರೂರು ಈಶ್ವರ ಸಹಿತ ಪಾಡಿ ಶ್ರೀ ಇಗ್ಗುತ್ತಪ್ಪ, ನೆಲಜಿ ಇಗ್ಗುತ್ತಪ್ಪ, ಮಲೆ ತಿರಿಕೆ, ಮಲೆ ಮಲ್ಲೇಶ್ವರ, ಗುಹ್ಯ, ನಂಜರಾಯಪಟ್ಟಣ, ಕಣಿವೆ ಮುಂತಾದೆಡೆಗಳಲ್ಲಿ ಮಹಾಶಿವರಾತ್ರಿಯ ಪೂಜೆ ನಡೆಯಲಿದೆ. ವಿವಿಧ ದೇವಾಲಯಗಳಲ್ಲಿ ಅಹೋರಾತ್ರಿ ಪೂಜೆಯೊಂದಿಗೆ ಭಜನೆ, ಹರಿಕತೆ, ಸಂಕೀರ್ತನೆಗಳ ಮೂಲಕ ಜಾಗರಣೆ ವ್ರತಗಳನ್ನು ಹಮ್ಮಿಕೊಳ್ಳಲಾಗಿದೆ.

ಅನೇಕ ದೇವಾಲಯಗಳಲ್ಲಿ ತಾ. 21 ರಂದು (ಇಂದು) ಮಹಾಪೂಜೆಯ ಬಳಿಕ ತೀರ್ಥಪ್ರಸಾದದೊಂದಿಗೆ; ಅನ್ನದಾನ ಏರ್ಪಡಿಸಿದ್ದು; ಇನ್ನು ಕೆಲವೆಡೆ ರಾತ್ರಿ ಜಾಗರಣೆ ಬಳಿಕ ತಾ. 22 ರಂದು (ನಾಳೆ) ಅನ್ನದಾನ ನಡೆಸಲಾಗುವದು ಎಂದು ಸಂಬಂಧಿಸಿದ ದೇವಾಲಯಗಳ ಪ್ರಮುಖರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆ ಕಾಲಾತೀತ ಮಹಾದೇವನ ಪೂಜೆಯೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸಿದ್ದಾಪುರ : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಯುವ ಕಲಾ ಸಂಘದ ವತಿಯಿಂದ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ತಾ. 21 ರಂದು (ಇಂದು) ಮೂರನೇ ವರ್ಷದ ಮಹಾಶಿವರಾತ್ರಿ ಜಾಗರಣೋತ್ಸವ ನಡೆಯಲಿದೆ.

ಸಂಜೆ 6 ಗಂಟೆಗೆ ಕಾವೇರಿ ನದಿಯಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ನಂತರ ಚಂಡೆವಾದ್ಯಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಲಿದೆ. 7 ಗಂಟೆಗೆ ಮುತ್ತಪ್ಪ ಪಯಂಗುತ್ತಿ ಪೂಜೆ ಜರುಗಲಿದೆ.

ನಂತರ ಧಾರ್ಮಿಕ ಪ್ರವಚನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ವಕೀಲ ಕೃಷ್ಣಮೂರ್ತಿ ಹಾಗೂ ಕಾವಾಡಿಯ ಪುರೋಹಿತರಾದ ರಾಮಚಂದ್ರ ಭಟ್ ಉಪಸ್ಥಿತರಿರುವರು.

ದೇವಾಲಯದ ಅಧ್ಯಕ್ಷ ಪಾಲಚಂಡ ಚೀಯಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮಹಾಪೂಜೆಯ ನಂತರ ಭಕ್ತರಿಗೆ ಅನ್ನದಾನವಿದ್ದು, ಉಪವಾಸ ವ್ರತ ಮಾಡುವವರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಯುವ ಕಲಾ ಸಂಘದ ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.

ಕೆದಕಲ್: ಕೆದಕಲ್ ಬಳಿಯ 7ನೇ ಮೈಲಿನ ಈಶ್ವರ ಸ್ವಾಮಿ ಹಾಗೂ ಭದ್ರಕಾಳೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ತಾ. 21 ರಂದು (ಇಂದು) ಸಂಜೆ 4.30ರ ನಂತರ ಮಹಾ ಸಂಕಲ್ಪ, ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹಃ, ಪಂಚಕಲಶ, ನವಗ್ರಹ ಪೂಜೆ ಹಾಗೂ ಗಣಪತಿ ಹೋಮ, ನವಗ್ರಹ ಹೋಮ ಪೂರ್ಣಹುತಿ ನಂತರ ಈಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ವಿಶೇಷ ಪುಷ್ಪಾಲಂಕಾರ ಹಾಗೂ ಬಿಲ್ವಾರ್ಚನೆ, ಸಹಸ್ರ ದೀಪಾರಾಧನೆ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಶನಿವಾರಸಂತೆ: ಇಲ್ಲಿಗೆ ಸಮೀಪದ ಮೈಲಾತ್ಪುರ ಗ್ರಾಮ ಮತ್ತು ನಾಗಾವಾರ ಗ್ರಾಮದಲ್ಲಿ ತಾ. 21 ರಂದು ಮಹಾಶಿವರಾತ್ರಿ ಪ್ರಯುಕ್ತ ಸಂಜೆ 6 ರಿಂದ ಪ್ರಾರಂಭಗೊಂಡು ತಾ. 22 ರಂದು ಶನಿವಾರ ಪ್ರಾತಃಕಾಲ 4.30ಕ್ಕೆ ಗಂಗಾ ಪೂಜೆ ಮತ್ತು ಶ್ರೀ ಶನಿದೇವರ ಕಳಸ ಪೂಜೆ, ನವಗ್ರಹಗಳಿಗೆ ಪೂಜೆ, ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕಳಸ ಪೂಜೆ ನಡೆಯಲಿದೆ. ಹಗಲು 10 ಗಂಟೆಗೆ ಮಹಾಮಂಗಳಾರತಿ ಸಂಜೆ 4 ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 8ಕ್ಕೆ ಶನಿದೇವರ ಹರಿಕಥಾ ಕಾಲಕ್ಷೇಪ ಏರ್ಪಡಿಸಲಾಗಿದೆ ಎಂದು ಪ್ರಧಾನ ಅರ್ಚಕ ಎಂ.ಈ. ಈರಯ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಕಂಬಿಬಾಣೆ ವಿಶ್ವನಾಥ ದೇವಸ್ಥಾವದಲ್ಲಿ ಶಿವರಾತ್ರಿ ದಿನ ವಿವಿಧ ಪೂಜಾಕಾರ್ಯಗಳು ನಡೆಯಲಿದೆ. ಜಾಗರಣೆ ಅಂಗವಾಗಿ ರಾತ್ರಿ ಪೂರ್ತಿ ದೇವಸ್ಥಾನ ಆವರಣದಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.