ಮಡಿಕೇರಿ, ಫೆ. 19: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ, ಯೂತ್ ರೆಡೆಕ್ರಾಸ್, ರೆಡ್ ರಿಬ್ಬನ್ ಸಂಸ್ಥೆಯ ವತಿಯಿಂದ ನಗರ ಆರೋಗ್ಯ ಅಭಿಯಾನದಡಿಯಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸ.ಪ್ರ.ದ. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ರಕ್ತದೊತ್ತಡ, ತೂಕ, ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ರಕ್ತದ ಗುಂಪುಗಳ ಪರೀಕ್ಷೆಯನ್ನು ತಜ್ಞ ವೈದ್ಯರಾದ ಡಾ. ಮಹದೇವಪ್ಪ, ಡಾ. ಅಮೃತ ಬಿಂದು ಮತ್ತು ಆರೋಗ್ಯ ಸಹಾಯಕರು ನಡೆಸಿದರು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗವು ತಮ್ಮ ಸಾಮಾನ್ಯ ಸಮಸ್ಯೆಗಳನ್ನು ವೈದ್ಯರಲ್ಲಿ ತಿಳಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರು. ಜೊತೆಗೆ ತಮ್ಮ ರಕ್ತದ ಗುಂಪುಗಳ ಬಗ್ಗೆಯೂ ಸಹ ಮಾಹಿತಿ ಪಡೆದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ, ಪ್ರಾಧ್ಯಾಪಕ ಡಾ. ದಯಾನಂದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಸೇರಿದಂತೆ ಇತರರು ಇದ್ದರು.