ಮಡಿಕೇರಿ, ಫೆ. 19: ಎಮ್ಮೆಮಾಡು ಕ್ಷೇತ್ರದಲ್ಲಿ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಆದರೆ ಮುಖ್ಯ ರಸ್ತೆ ಯಿಂದ ಮಸೀದಿಗೆ ತೆರಳುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗು ತ್ತಿದ್ದು, ಉರೂಸ್‍ಗೂ ಮೊದಲು ಡಾಮರೀಕ ರಣವನ್ನು ಪೂರ್ಣ ಗೊಳಿಸಬೇಕೆಂದು ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ.

ಮುಖ್ಯ ರಸ್ತೆಯಿಂದ ಎಮ್ಮೆಮಾಡು ಮಸೀದಿಯವರೆಗೆ ಎರಡು ಕಿಲೋ ಮೀಟರ್ ದೂರದ ರಸ್ತೆಯನ್ನು ಡಾಮರೀಕರಣಗೊಳಿಸಲಾಗುತ್ತಿದೆ. ಸುಮಾರು 100 ಮೀಟರ್ ಉದ್ದದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ. ಆದರೆ ಕಾಮಗಾರಿ ಆರಂಭಗೊಂಡು ಹಲವು ದಿನಗಳೇ ಕಳೆದಿದ್ದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ತಾ. 28 ರಿಂದ ಮಾ. 6 ರವರೆಗೆ ನಡೆಯುವ ವಾರ್ಷಿಕ ಉರೂಸ್‍ಗೆ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಷ್ಟೇ ಸಂಖ್ಯೆಯ ವಾಹನಗಳು ಕೂಡ ಬರಲಿದ್ದು, ಸುಸಜ್ಜಿತ ರಸ್ತೆಯ ಅಗತ್ಯವಿದೆ. ಆದರೆ ರಸ್ತೆ ಅಭಿವೃದ್ಧಿ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಉರೂಸ್ ಆರಂಭಕ್ಕೂ ಮೊದಲು ಪೂರ್ಣಗೊಳ್ಳುವ ಬಗ್ಗೆ ಮನ್ಸೂರ್ ಆಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ರಸ್ತೆ ಅವ್ಯವಸ್ಥೆಯಿಂದ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಮತ್ತು ಭಕ್ತರಿಗೆ ಅಡಚಣೆಯಾಗುವುದಲ್ಲದೆ, ಗ್ರಾಮ ತುಂಬಾ ಧೂಳುಮಯವಾಗುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಎಮ್ಮೆಮಾಡು ಉರೂಸ್‍ನ್ನು ಯಶಸ್ವಿಗೊಳಿಸಲು ಸಹಕರಿಬೇಕೆಂದು ಅವರು ಮನವಿ ಮಾಡಿದ್ದಾರೆ.