ಮಡಿಕೇರಿ, ಫೆ. 20: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಯಾವದೇ ಗೊಂದಲ ನಡೆದಿಲ್ಲ ಬದಲಾಗಿ ಆರೋಗ್ಯಕರವಾದ ಚರ್ಚೆ ನಡೆದಿರುವದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಅವರು ತಿಳಿಸಿದ್ದಾರೆ. ಈ ಕುರಿತಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗೆ ಅವರು ಪ್ರತಿಕ್ರಿಯಿಸಿದ್ದು; ಸ್ಪಷ್ಟನೆ ನೀಡಿದ್ದಾರೆ.

ಕೆಪಿಸಿಸಿ ಸೂಚನೆಯಂತೆ ಜಿಲ್ಲಾಧ್ಯಕ್ಷರು ಕಾರ್ಯ ನಿರ್ವಹಿಸಬೇಕಾಗುತ್ತದೆಯೇ ಹೊರತು ಸ್ವಂತ ನಿರ್ಧಾರಗಳನ್ನು ಕೈಗೊಳ್ಳಲು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅವಕಾಶಗಳಿರುವುದಿಲ್ಲ. ಮಡಿಕೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಗರ ಕಾಂಗ್ರೆಸ್ ಘಟಕವನ್ನು ಪ್ರತ್ಯೇಕವಾಗಿ ರಚಿಸಲಾಗಿದೆ. ಈ ಹಿಂದೆಯೂ ಪಕ್ಷದ ಹಿತದೃಷ್ಟಿಯಿಂದ ಹಲವು ಸಂದರ್ಭಗಳಲ್ಲಿ ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿವೆ ಎಂದು ಮಂಜುನಾಥ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಬೆಳವಣಿಗೆಯನ್ನು ಸಹಿಸದ ಕೆಲವರು ಪಕ್ಷದೊಳಗಿದ್ದುಕೊಂಡೇ ಮಾಧ್ಯಮಗಳಿಗೆ ಕಪೋಲಕಲ್ಪಿತ ಮಾಹಿತಿಯನ್ನು ನೀಡಿದ್ದಾರೆ. ಇಂತಹವರ ವಿರುದ್ಧ ವರಿಷ್ಠರಿಗೆ ದೂರು ನೀಡಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಯಾರೂ ‘ವೀಕೆಂಡ್ ರಾಜಕಾರಣಿ’ಗಳಿಲ್ಲ, ಪ್ರತಿಯೊಬ್ಬ ಪದಾಧಿಕಾರಿ ಹಾಗೂ ಕಾರ್ಯಕರ್ತರು ತಮ್ಮದೇ ಆದ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಪಕ್ಷಕ್ಕಾಗಿ ಯಾವುದೇ ತ್ಯಾಗ ಮಾಡದ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದು, ಪಕ್ಷ ದ್ರೋಹಿಗಳ ವಿರುದ್ಧ ಕೆಪಿಸಿಸಿ ನಿಗಾ ಇರಿಸಿದೆ. ಜನಪರ ಹೋರಾಟ ಮತ್ತು ಜಿಲ್ಲೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಗ್ರಾ.ಪಂ ಮತ್ತು ಮಡಿಕೇರಿ ನಗರಸಭೆ ಚುನಾವಣೆ ಸಮೀಪಿಸುವುದರಿಂದ ವಿನಾಕಾರಣ ಗೊಂದಲವನ್ನು ಸೃಷ್ಟಿಸದೆ ಅಧಿಕಾರವನ್ನು ಹಿಡಿಯುವ ಗುರಿ ಹೊಂದಬೇಕೆಂದು ಮನವಿ ಮಾಡಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷದ ಜಿಲ್ಲಾಧ್ಯಕ್ಷನಿಗೆ ಅನೇಕ ಜವಾಬ್ದಾರಿಗಳಿರುತ್ತವೆ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆ ನಡೆದ ದಿನ ಕುಶಾಲನಗರ ಬ್ಲಾಕ್‍ನ ತೊರೆನೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹಾಜರಾಗಿ ನಂತರ ಮಡಿಕೇರಿ ಸಭೆಗೆ ಸ್ವಲ್ಪ ತಡವಾಗಿ ಬಂದಿದ್ದೇನೆ. ಅಲ್ಲದೆ ಮೀಸಲಾತಿ ಗೊಂದಲದ ಬಗ್ಗೆ ಮಾರನೇ ದಿನ ಆಯೋಜಿಸಿದ್ದ ಪ್ರತಿಭಟನೆಗೆ ಪೂರ್ವಭಾವಿಯಾಗಿ “ಎನ್‍ಎಸ್‍ಯುಐ”ನ ಸಭೆ ನಡೆಸಿ ದುಂಡಳ್ಳಿ, ಶನಿವಾರಸಂತೆ, ಶಿರಂಗಾಲ ವಲಯ ಕಾಂಗ್ರೆಸ್ ಸಭೆಗಳನ್ನು ಆ ದಿನವೇ ಮಾಡಲಾಗಿದೆ. ಜಿಲ್ಲಾಧ್ಯಕ್ಷರ ಕಾರ್ಯವೈಖರಿಯನ್ನು ಟೀಕಿಸುವ ಸಣ್ಣತನದ ಮಂದಿ ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್ ಪಕ್ಷ ಎನ್ನುವುದು ತುಂಬಿದ ಮನೆಯಾಗಿದ್ದು, ಇಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಮೂಡುವುದು ಸಹಜ. ಇದು ಪಕ್ಷದ ಬೆಳವಣಿಗೆಗೆ ಪೂರಕವಾಗಿರುತ್ತದೆಯೇ ಹೊರತು ಪ್ರಚಾರಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.