ಮಡಿಕೇರಿ, ಫೆ. 20: ಕೊಡಗಿನಲ್ಲಿ ಕೊಡವ ಭಾಷೆ, ಸಂಸ್ಕøತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ತನ್ನದೇಯಾದ ನೆಲೆಗಟ್ಟಿನಲ್ಲಿ ಬಾಳಿ ಬದುಕುತ್ತಿರುವ 18 ಕೊಡವ ಭಾಷಿಕ ಮೂಲನಿವಾಸಿ ಜನಾಂಗದವರು ಒಂದುಗೂಡುವ ಅನಿವಾರ್ಯತೆಯಿದೆ ಎಂದು ಭಾಷಿಕ ಸಮುದಾಯಗಳ ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಮಲೆಯ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಸ್ವಾತಂತ್ರ್ಯ ಕಳೆದು ಅದೆಷ್ಟೋ ವರ್ಷಗಳು ಕಳೆದರೂ ಕೂಡ ಇರುವರೆಗೂ ಭಾಷಿಕ ಜನಾಂಗದವರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಸಂಬಂಧಿಸಿದ ಜಿಲ್ಲಾಡಳಿತ, ಜನಪ್ರತಿನಿಧಿಗಳು ವಿಫಲತೆಯನ್ನು ಕಾಣುತ್ತಿರುವುದು ವಿಪರ್ಯಾಸ. ಕೊಡಗಿನ ನೆಲ, ಜಲದೊಂದಿಗೆ ಕೊಡವ ಭಾಷೆ, ಸಂಸ್ಕøತಿಗೆ 18 ಜನಾಂಗ ಕಸುಬಿನೊಂದಿಗೆ ತನ್ನದೇಯಾದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ಈ ದಿಸೆಯಲ್ಲಿ ಜನಾಂಗದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಒಂದಾಗಿ ಸೇರಿ ಒಗ್ಗಟ್ಟಿನೊಂದಿಗೆ ಹೋರಾಡುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.
ಕೊಡಗು ಮಲೆಯ ಸಮಾಜದ ಅಧ್ಯಕ್ಷ ನಿವೃತ್ತ ಸೇನಾನಿ ರಾಜಾ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಕಾರ್ಯದರ್ಶಿ ಮಲೆಯರ ಮುತ್ತಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ, ನಾಡಿನಾದ್ಯಂತ ವಿವಿಧ ದೈವದ ಕೋಲಗಳನ್ನು ಕಟ್ಟುವುದರ ಮೂಲಕ ಜನಾಂಗ ಜವಾಬ್ದಾರಿಯುತ ಕಾರ್ಯವನ್ನು ನಡೆಸುತ್ತಿದೆ. ಸಂಬಂಧಿಸಿದ ಇಲಾಖೆ ಹಾಗೂ ಅಕಾಡೆಮಿಗಳು ನಮ್ಮನ್ನು ಗುರುತಿಸುವಲ್ಲಿ ವಿಫಲವಾಗಿದ್ದಾರೆ. ಜನಾಂಗದ ಧಾರ್ಮಿಕ ಕಾರ್ಯದ ಸೂಕ್ತ ದಾಖಲೆಯ ಪುಸ್ತಕ ಪ್ರಕಟಗೊಳ್ಳುವಲ್ಲಿ ಕೊಡವ ಅಕಾಡೆಮಿ ಮುತುವರ್ಜಿ ವಹಿಸಲಿ ಎಂದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷೆ ಝಾನ್ಸಿ, ಖಜಾಂಚಿ ಬಿದ್ದಪ್ಪ, ಸಹಕಾರ್ಯದರ್ಶಿ ಧರಣೇಶ್, ಸದಸ್ಯರಾದ ಅಶೋಕ್, ರಮೇಶ್ ಭಾಗವಹಿಸಿದ್ದರು. ಮೇಘನಾ ಸಂಗಡಿಗರು ಪ್ರಾರ್ಥಿಸಿ, ಸವಿತಾ ಮುತ್ತಣ್ಣ ನಿರೂಪಿಸಿದರು. ಉಷಾಕಿರಣ್ ಸ್ವಾಗತಿಸಿದರು. ಜನಾಂಗದ ಹಿರಿಯರಾದ ಬೊಳ್ಳಮ್ಮ ದೀಪ ಬೆಳಗಿಸಿ, ಸಮಾಜದ ಅಭಿವೃದ್ಧಿಗೆ ಶುಭ ಕೋರಿದರು. ಸಭೆಯಲ್ಲಿ ಸಮಾಜವನ್ನು ಸೊಸೈಟಿ ಆ್ಯಕ್ಟ್ ಪ್ರಕಾರ ನೋಂದಾಯಿಸಲು ಸಹಕರಿಸಿದ ಸಾಬ ಸುಬ್ರಮಣಿ ಅವರನ್ನು ಜನಾಂಗದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮಲೆಯರ ಶಬರಿ ವಂದಿಸಿದರು.