ಮಡಿಕೇರಿ, ಫೆ. 20: ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟು ಉದ್ಯಾನವನದÀ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್ ಒತ್ತಾಯಿಸಿದ್ದಾರೆ.
ಪ್ರಕೃತಿ ರಮಣೀಯ ಪ್ರವಾಸಿತಾಣ ರಾಜಾಸೀಟಿಗೆ ಪ್ರತಿದಿನ ಸಾವಿರಾರು ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಉದ್ಯಾನವನಕ್ಕೆ ಬರುವವರಿಂದ ಪ್ರವೇಶ ಶುಲ್ಕವನ್ನು ಕೂಡ ಪಡೆಯಲಾಗುತ್ತದೆ. ಮುಂಜಾನೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಉದ್ಯಾನವನದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ರಾತ್ರಿ 7.30 ಸಮೀಪಿಸುತ್ತಿರುವಂತೆಯೇ ರಾಜಾಸೀಟಿನ ಎಲ್ಲಾ ವಿದ್ಯುತ್ ದೀಪಗಳ ಬೆಳಕನ್ನು ಕಡಿತಗೊಳಿಸಲಾಗುತ್ತಿದೆ. ಇದರಿಂದ ಉದ್ಯಾನವನದೊಳಗೆ ವಿಹರಿಸುತ್ತಿರುವ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿರುವುದಲ್ಲದೆ ಕಾರ್ಗತ್ತಲೆಯಿಂದ ಮಹಿಳೆಯರು ಹಾಗೂ ಮಕ್ಕಳು ಭಯಪಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಪ್ರವೇಶ ಶುಲ್ಕ ಪಾವತಿಸಿದ ನಂತರವೂ ಉದ್ಯಾನವನದೊಳಗೆ ಇರುವ ಶೌಚಾಲಯಕ್ಕೆ ತೆರಳುವವರಿಗೆ ಶುಲ್ಕ ವಿಧಿಸಲಾಗುತ್ತಿದ್ದು, ಈ ಕ್ರಮವನ್ನು ತಕ್ಷಣ ಕೈಬಿಡಬೇಕು. ಶುದ್ಧ ಕುಡಿಯುವ ನೀರು ಮತ್ತು ಸುಸಜ್ಜಿತ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಬೇಕು, ಸಂಗೀತ ಕಾರಂಜಿಯ ಪ್ರದರ್ಶನದ ಅವಧಿಯನ್ನು ಹೆಚ್ಚಿಸಬೇಕು ಹಾಗೂ ರಾಜಾಸೀಟು ಉದ್ಯಾನವನದ ಪ್ರದೇಶವನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟು ಬೆಳಕಿನ ವ್ಯವಸ್ಥೆಯೊಂದಿಗೆ ಆಕರ್ಷಕಗೊಳಿಸಬೇಕೆಂದು ದೀಪಕ್ ಆಗ್ರಹಿಸಿದ್ದಾರೆ.