ಮಡಿಕೇರಿ, ಫೆ. 18 : ಅಡುಗೆ ಅನಿಲದ ಸಹವಾಸ ಬೇಡವೆಂದು ಸೌದೆಯಲ್ಲೇ ಅಡುಗೆ ಮಾಡಿದರು, ಖಾಲಿ ಸಿಲಿಂಡರ್‍ಗಳನ್ನು ಜಿಲ್ಲಾಡಳಿತದ ಭವನಕ್ಕೆ ತಂದರು. ಕೇಂದ್ರ ಸರ್ಕಾರದ ವಿರುದ್ಧ ಮಹಿಳೆಯರು ಘೋಷಣೆಗಳನ್ನು ಕೂಗಿದರು.

ಹೀಗೆ, ಅಡುಗೆ ಅನಿಲದ ಬೆಲೆಯನ್ನು ದುಬಾರಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳಾ ಕಾರ್ಯಕರ್ತರು ಸೌದೆ ಒಲೆಯಲ್ಲಿ ಕಾಫಿ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಮಹಿಳಾ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಭರವಸೆಗಳೊಂದಿಗೆ ಅಧಿಕಾರಕ್ಕೆ ಬಂದು, ಉತ್ತಮ ಆಡಳಿತ ನೀಡುವ ವಿಶ್ವಾಸ ಮೂಡಿಸಿದಂತೆ ಮಾಡಿ ಈಗ ಶ್ರೀಮಂತರ ಪರವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆಳ್ವಿಕೆಯ ಸಂದರ್ಭ ಜನಸಮಾನ್ಯರಿಗೆ ಕಡಿಮೆ ದರದಲ್ಲಿ ಅಡುಗೆ ಅನಿಲ ವಿತರಣೆಯಾಗುತ್ತಿತ್ತು. ಮಹಿಳೆಯರು ನೆಮ್ಮದಿಯಿಂದ ಜೀವನ ಸಾಗಿಸುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿತ್ತು. ಆದರೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೈಲೋತ್ಪನ್ನಗಳು ಮಾತ್ರವಲ್ಲದೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಲೇ ಬರುತ್ತಿದ್ದು, ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದರ ವಿರುದ್ಧ ಅಸಮಾಧಾನ

ಎರಡು ಬಾರಿ ಕೊಡಗನ್ನು ಪ್ರತಿನಿಧಿಸಿದ ಸಂಸದ ಪ್ರತಾಪ್ ಸಿಂಹ ಅವರು ಚುನಾವಣೆ ಸಂದರ್ಭ ಮತಗಳಿಕೆಗಾಗಿ ತೋರಿದ ಕಾಳಜಿಯನ್ನು ಈಗ ತೋರುತ್ತಿಲ್ಲ. ಗೆದ್ದು ಬಂದ ನಂತರ ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಲು ತಿರುಗಿಯೂ ನೋಡುತ್ತಿಲ್ಲವೆಂದು ಡಾ.ಪುಷ್ಪ ಅಮರನಾಥ್ ಟೀಕಿಸಿದರು.

ಮಹಿಳಾ ಕಾಂಗ್ರೆಸ್‍ನ ರಾಜ್ಯ ಉಪಾಧ್ಯಕ್ಷೆ ಪುಷ್ಪವಲ್ಲಿ, ಕೆಪಿಸಿಸಿ ಮುಖಂಡರಾದ ಕೆ.ಪಿ.ಚಂದ್ರಕಲಾ, ತಾರಾಯ್ಯಮ್ಮ, ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಜಿ.ಪಂ. ಸದಸ್ಯೆ ಸುನೀತ ಮಂಜುನಾಥ್, ಮಡಿಕೇರಿ ನಗರ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷೆ ಪೊನ್ನಕ್ಕಿ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷೆ ಶೀಲಾ ಡಿಸೋಜ, ಮಹಿಳಾ ಘಟಕದ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆ ಫೀಲೋಮಿನ, ಸೇವಾದಳದ ಅಧ್ಯಕ್ಷೆ ಪ್ರೇಮಾ ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಸಾಮಾಜಿಕ ಜಾಲತಾಣದ ಮಹಿಳಾ ಅಧ್ಯಕ್ಷೆ ಕೈರುನ್ನಿಸಾ, ಡಿಸಿಸಿ ಸದಸ್ಯೆ ಗೀತಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್, ರಾಜೀವ್‍ಗಾಂಧಿ ಪಂಚಾಯತ್ ರಾಜ್ ಅಧ್ಯಕ್ಷ ತೆನ್ನಿರಮೈನಾ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾಮುದ್ದಪ್ಪ, ನಗರ ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.