ಮಡಿಕೇರಿ, ಫೆ. 13: ಮಡಿಕೇರಿ ನಗರಕ್ಕೆ ಹೊಂದಿಕೊಂಡಿರುವ ಸ್ಟೋನ್‍ಹಿಲ್ ಬಳಿ ಬೆಟ್ಟದಲ್ಲಿ; ಮಡಿಕೇರಿ ನಗರಸಭೆಯಿಂದ ಕಸ ಎಸೆಯುವ ಪರಿಣಾಮ; ಪ್ರತಿನಿತ್ಯ 200ಕ್ಕೂ ಅಧಿಕ ಪೊಲೀಸ್ ಕುಟುಂಬಗಳೊಂದಿಗೆ ಸುಬ್ರಹ್ಮಣ್ಯ ನಗರ ಹಾಗೂ ಸುತ್ತಮುತ್ತಲಿನ ನೂರಾರು ನಾಗರಿಕ ಕುಟುಂಬಗಳು ದೈನಂದಿನ ಬದುಕಿನಲ್ಲಿ ಬವಣೆ ಪಡುವಂತಾಗಿದೆ.ಬೆಟ್ಟದ ಈ ಕಸದ ಕೊಂಪೆಯಲ್ಲಿ ಕೊಳೆತು ನಾರುವ ದುರ್ನಾತ ಗಾಳಿಯಲ್ಲಿ ಪಸರಿಸಿ; ಗಾಳಿಯು ಮಲೀನಗೊಂಡು ಸಂಬಂಧಿಸಿದ ನಿವಾಸಿಗಳು ಕೆಟ್ಟ ಗಾಳಿಯನ್ನೇ ಉಸಿರಾಡುತ್ತಾ; ರೋಗ ರುಜಿನಗಳಿಗೆ ಒಳಗಾಗುವಂತಾಗಿದೆ ಎಂದು ಅನೇಕ ನಾಗರಿಕರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.ಪ್ರಸ್ತುತ ನಗರಸಭೆಯು ಮಡಿಕೇರಿಯ ಬೆಟ್ಟ ಸಾಲಿನಲ್ಲಿ ಕಸ ಸುರಿಯಬಾರದೆಂದೂ; ಈ ಪ್ರದೇಶದಿಂದ ಕಸ ತೆರವುಗೊಳಿಸಿ ಅಲ್ಲೊಂದು ಸುಂದರ ಉದ್ಯಾನ ನಿರ್ಮಿಸಬೇಕೆಂದು ಈಚೆಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಖುದ್ದು ಸ್ಥಳ ಪರಿಶೀಲಿಸಿ ನಗರಸಭೆ ಆಯುಕ್ತರಿಗೆ ತಾಕೀತು ಮಾಡಿದ್ದರು. ಆದರೆÉ ಸಂಬಂಧಿಸಿದವರು ಇತ್ತ ಯಾವದೇ ಗಮನ ಹರಿಸಿದಂತಿಲ್ಲ. ಈ ಬೆಟ್ಟದ ಕೆಳ ಹಂತದಲ್ಲಿ 200 ಅಧಿಕ ಪೊಲೀಸ್ ವಸತಿಗೃಹಗಳಿದ್ದು; ಅಲ್ಲಿನ ಮಕ್ಕಳಿಗೆ ಕ್ರೀಡಾಂಗಣ ದೊಂದಿಗೆ ಹಿರಿಯರಿಗೆ ವಾಯುವಿಹಾರಕ್ಕಾಗಿ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ರೂ. 30 ಲಕ್ಷ ಅನುದಾನದೊಂದಿಗೆ ಉದ್ಯಾನಕ್ಕೆ ಹಣ ಬಿಡುಗಡೆ ಗೊಳಿಸಿದ್ದಾರೆ.

ಇದೀಗ ಕಾಮಗಾರಿಯು ಆರಂಭಗೊಂಡಿದ್ದು, ಸುನಿಲ್ ಸುಬ್ರಮಣಿ ಅವರು ಕಾಮಗಾರಿಯ ಪರಿಶೀಲನೆ ನಡೆಸಿದರು. ಈ ವೇಳೆ ನಾಗರಿಕರು ಜಲಮೂಲ ರಕ್ಷಣೆ ಯೊಂದಿಗೆ ತಮಗೆ ಎದುರಾಗಿರುವ ಬವಣೆಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಜಲಮೂಲಕ್ಕೆ ಕುತ್ತು : ಆದರೆ ಈ ಯೋಜನೆ ಕೈಗೊಂಡಿರುವ ಪರಿಸರದಲ್ಲಿ ಶತ ಶತಮಾನಗಳಿಂದ ಪರಿಶುದ್ಧ ಜಲಮೂಲವಿದ್ದು; ಆ ನೀರು ಪೊಲೀಸ್ ಕುಟುಂಬಗಳ ಸಹಿತ ಅಲ್ಲಿನ ನಿವಾಸಿಗಳಿಗೆ ಬಳಕೆಯಾಗುತ್ತಿತ್ತು. ಆದರೆ ನಗರಸಭೆ ಬೆಟ್ಟದಲ್ಲಿ ಕಸ ಹಾಕುವ ಪರಿಣಾಮ ತ್ಯಾಜ್ಯಗಳು ನೀರಿನಲ್ಲಿ ಸೇರಿಕೊಂಡು ಜಲಮೂಲವೂ ಕೆಟ್ಟ ವಾಸನೆ ಬೀರತೊಡಗಿದೆ. ಹೀಗಾಗಿ ಜಲಮೂಲ ಸಹಿತ ಸುಂದರ ತಾಣದಲ್ಲಿ ವಾಯುವಿಹಾರ ದೊಂದಿಗೆ; ಮಕ್ಕಳಿಗೆ ಆಟವಾಡಲು ಸಿದ್ಧಗೊಳ್ಳುತ್ತಿರುವ ಪ್ರದೇಶದಲ್ಲಿ ಬೆಟ್ಟಸಾಲಿನ ಕಸದಿಂದ ಬೀರುವ ದುರ್ನಾತ

(ಮೊದಲ ಪುಟದಿಂದ) ಗಾಳಿಯಲ್ಲಿ ಸೇರಿಕೊಂಡು ಪೊಲೀಸ್ ಕುಟುಂಬ ಗಳು ಮೂಗು ಮುಚ್ಚಿಕೊಳ್ಳುವ ಸನ್ನಿವೇಶ ಎದುರಾಗಿದೆ.

ಮಳೆಗಾಲದಲ್ಲಿ ಕೊಳೆತ ತ್ಯಾಜ್ಯ ನೀರು ಈ ವಸತಿಗಳ ಚರಂಡಿಯಲ್ಲಿ ಹರಿದರೆ; ಬೇಸಿಗೆಯಲ್ಲಿ ಕೆಟ್ಟ ಗಾಳಿ ಸಹಿತ ನೊಣಗಳ ಕಾಟದಿಂದ ನಿತ್ಯ ಬವಣೆಯೊಂದಿಗೆ ಸಾಂಕ್ರಮಿಕ ರೋಗ ಭಯ ಕಾಡತೊಡಗಿದೆ. ಈ ಸ್ಥಳವೂ ಒಂದೊಮ್ಮೆ ಕರವಾಲೆ ಭಗವತಿ ದೇವಾಲಯದ ದೈವಕೋಲಗಳು ಹೊರಡುವ ಪ್ರವಿತ ಸ್ಥಳವೂ ಆಗಿತ್ತೆಂದು ಹಿರಿಯರು ನೆನಪಿಸಿದ್ದಾರೆ. ಅಲ್ಲದೆ ಇತ್ತ ನಗರಸಭೆ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ತುರ್ತು ಗಮನ ಹರಿಸಿ ಕಸಕ್ಕೆ ಮುಕ್ತಿ ಕಾಣಿಸಬೇಕೆಂದು ನಾಗರಿಕರು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

-ಶ್ರೀಸುತ