ಮಡಿಕೇರಿ, ಫೆ.18 : ಮಡಿಕೇರಿ - ಕುಶಾಲನಗರ ರಸ್ತೆ (ರಾಷ್ಟ್ರೀಯ ಹೆದ್ದಾರಿ 275) ಡಾಂಬರೀಕರಣಕ್ಕೆ ಕೇಂದ್ರ ಸರಕಾರ 30.49 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಿದ್ದ ಪರಿಣಾಮ ಅನುದಾನ ಬಿಡುಗಡೆಗೊಂಡಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಮಡಿಕೇರಿ ಸಮೀಪದ ಕಾಟಕೇರಿಯಿಂದ ಕುಶಾಲನಗರವರೆಗೆ ಡಾಂಬರೀಕರಣ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿರುವ ಸಂಸದರು, ಕೊಡಗಿನ ಜನತೆಯ ಬೇಡಿಕೆಗಳಿಗೆ ಸದಾ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ರೀತಿ ಕಳೆದ ಎರಡು ವರ್ಷ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂ ಕುಸಿತದಿಂದ ತೀವ್ರ ಹಾನಿಗೀಡಾಗಿದ್ದ ಮಡಿಕೇರಿ - ಸಂಪಾಜೆ ರಸ್ತೆ (ಎನ್ಎಚ್ 275)ಯಲ್ಲಿ ತಡೆಗೋಡೆ ಮತ್ತಿತರ ಕಾಮಗಾರಿ ಗಳಿಗೆ ಪ್ರತಾಪ್ ಸಿಂಹ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರಕಾರ 58.8 ಕೋಟಿ ರೂಪಾಯಿ ಇತ್ತೀಚೆಗೆ ಮಂಜೂರು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.