ಸಿದ್ದಾಪುರ, ಫೆ. 18: ಸಿದ್ದಾಪುರದಲ್ಲಿ ಸಂತ್ರಸ್ತರು ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಅಂತ್ಯಗೊಂಡಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಯ್ಯ ಗ್ರಾಮದ ನದಿ ತೀರದ ನಿವಾಸಿಗಳು ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಕಳೆದ 9 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಇಂದು ಸಂಜೆ ಜಿಲ್ಲಾಧಿಕಾರಿಗಳು ಹೋರಾಟ ಸಮಿತಿಯ ಪ್ರಮುಖರನ್ನು ಮಡಿಕೇರಿಗೆ ಕರೆಯಿಸಿ ಸಭೆ ನಡೆಸಿದ್ದಾರೆ. ಮುಂದಿನ 15 ದಿನಗಳ ಒಳಗೆ ಸಂತ್ರಸ್ತರಿಗೆ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಪುನರ್ವ ಸತಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಭರವಸೆ ನೀಡಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು ಗುರುತಿಸಿರುವ ಸ್ಥಳವನ್ನು ಪರಿಶೀಲಿಸಿ ತುರ್ತಾಗಿ ಕ್ರಮ ಕೈಗೊಂಡು ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಅಲ್ಲದೆ ಸಂತ್ರಸ್ತರ ಪಟ್ಟಿಯಲ್ಲಿ ಬದಲಾಗಿರುವುದು ತನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ಲೋಪ ದೋಷಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ರಜಿತ್, ಯಮುನಾ, ಮುಸ್ತಫ, ಬೈಜು, ಅಯ್ಯಪ್ಪ, ಧನ್ಯ, ಸುನಿತ, ಶ್ರೀನಿವಾಸ್ ಹರಿಹರ, ಪ್ರದೀಪ್ ಇದ್ದರು. ಅಧಿಕಾರಿಗಳ ಪರವಾಗಿ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ, ಕಂದಾಯ ಪರಿವೀಕ್ಷಕ ಹರೀಶ್, ಗ್ರಾಮ ಲೆಕ್ಕಿಗ ಒಮಪ್ಪ, ಅನೀಶ್, ಪಿ.ಡಿ.ಓ ವಿಶ್ವನಾಥ್ ಇದ್ದರು.