ಮಡಿಕೇರಿ, ಫೆ. 17: ಹೊರ ರಾಜ್ಯದಿಂದ ಕೊಡಗಿಗೆ ನಕಲಿ ಚಾಕೋಲೇಟ್ ತರಿಸುವದರೊಂದಿಗೆ; ‘ಕೂರ್ಗ್ ಗವರ್ನ್ಮೆಂಟ್’ ಇತ್ಯಾದಿ ರಂಗು ರಂಗಿನ ಕವರ್ಗಳಲ್ಲಿ ತುಂಬಿ ದುಬಾರಿ ಬೆಲೆಗೆ ಮಾರಾಟಗೊಳಿಸುವ ಮೂಲಕ; ಪ್ರವಾಸಿಗರನ್ನು ವಂಚಿಸುತ್ತಿರುವ ದಂಧೆ ವಿರುದ್ಧ ಸೂಕ್ತ ತನಿಖೆ ಕೈಗೊಂಡು; ಸಮರ್ಪಕ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.
ಇಂತಹ ದಂಧೆಯ ಕುರಿತು ಈ ಹಿಂದೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ; ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ವಿಷಯ ಪ್ರಸ್ತಾಪಿಸಿ ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ನಕಲಿ ಚಾಕೋಲೇಟ್ ದಂಧೆ ವಿರುದ್ಧ ಸೂಕ್ತ ಕಾನೂನು ಕ್ರಮದೊಂದಿಗೆ; ತಪ್ಪಿತಸ್ಥರ ವಿರುದ್ಧ ಕಠಿಣ ನಿರ್ಧಾರವನ್ನು ಜಿಲ್ಲಾಡಳಿತ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳು ಯಾವದೇ ಮಾಹಿತಿ ಸಂಗ್ರಹಿಸದೆ; ಒಂದಿಷ್ಟು ಚಾಕೋಲೇಟ್ ಮಾದರಿಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಕೈ ತೊಳೆದುಕೊಂಡಿದ್ದರು.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು; ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತವಾದ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದಾರೆ; ಜಿಲ್ಲೆಗೆ ನಕಲಿ ಚಾಕೋಲೇಟ್ ಎಲ್ಲಿಂದ ಬರುತ್ತಿದೆ; ಯಾರು ತರಿಸುತ್ತಿದ್ದಾರೆ; ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಶಂಕಿತ ವರ್ತಕರ ಸಹಿತ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಮರ್ಪಕ ವರದಿಯನ್ನು ಮುಂದಿನ ಒಂದು ವಾರದೊಳಗೆ ನೀಡುವಂತೆ ಆದೇಶಿಸಿದ್ದಾರೆ. ನಕಲಿ ಚಾಕೋಲೇಟ್ ದಂಧೆ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವದಾಗಿ ಈಗಾಗಲೇ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಘೋಷಿಸಿರುವದನ್ನು ಇಲ್ಲಿ ಸ್ಮರಿಸಬಹುದು.