ಮಡಿಕೇರಿ, ಫೆ. 17: ಸೂರ್ಲಬ್ಬಿ ನಾಡಿನ ಶ್ರೀ ಸುಬ್ರಹ್ಮಣ್ಯ ಹಾಗೂ ಮುಟ್ಲು ಶ್ರೀ ಮಂಜುನಾಥ ದೇವರುಗಳ ವಾರ್ಷಿಕ ಹಬ್ಬವು; ಜ. 31 ರಂದು ಕಟ್ಟುಕಟ್ಟಳೆಯೊಂದಿಗೆ ಶುರುವಾಗಿ; ತಾ. 7 ರಂದು ಪಟ್ಟಣಿ ಮೂಲಕ ಆರಂಭಗೊಂಡಿತು. ಅಂದಿನಿಂದ ತಾ. 14ರ ತನಕ ಇರುಬೊಳಕು ದುಡಿಹಾಡು ಸಹಿತ ನೆರವೇರಿತು.
ಪಟ್ಟಣಿ ಉತ್ಸವದಂದು ಸೂರ್ಲಬ್ಬಿ ನಾಡಿನ ಸಮಸ್ತ ಗ್ರಾಮಸ್ಥರು ಕುಟುಂಬವಾರು ದೇವರಿಗೆ ಹಾಲಕ್ಕಿ ತಂದು ನೈವೇದ್ಯ ಎಡೆ ಮೂಲಕ ಪೂಜೆ ಸಲ್ಲಿಸಿ ಇರುಬೊಳಕಾಟ್‍ಗೆ ಚಾಲನೆ ನೀಡಿದರು. ತಾ. 13 ರಂದು ಎತ್ತು ಪೋರಾಟ ಸಹಿತ ವಾರ್ಷಿಕ ದೊಡ್ಡ ಹಬ್ಬ ನೆರವೇರಿತು. ಅಂದು ಸದ್ಭಕ್ತರಿಗೆ ಅನ್ನದಾನದೊಂದಿಗೆ ಹರಕೆ ಕಾಣಿಕೆ; ಮರು ದಿನ ಮುಂಜಾನೆ ಮಹಾಪೂಜೆ ಹಾಗೂ ದೇವರಿಗೆ ಹರಕೆ ಕಾಣಿಕೆ ಬಳಿಕ ಮಡೆಸ್ನಾನ (ಉರುಳು) ಸೇವೆ ಮುಖಾಂತರ ಭಕ್ತರು ನಮನ ಸಲ್ಲಿಸಿದರು. ಅಲ್ಲದೆ ಅಂತಿಮವಾಗಿ ತೆಂಗಿನಕಾಯಿ ಎಳೆಯುವದು (ತೆಂಗೆಪೋರು) ಸೇರಿದಂತೆ ಶ್ರೀ ಸುಬ್ರಹ್ಮಣ್ಯನಿಗೆ ಈಡುಗಾಯಿ ಸಲ್ಲಿಸಲಾಯಿತು. ಪಟ್ಟಣಿಯಂದು ದೇವಾಲಯಕ್ಕೆ ತಂದಿದ್ದ ದೇವರ ಭಂಡಾರವನ್ನು ಮರಳಿ ಓಡಿಯಂಡ ಕುಟುಂಬದ ತಕ್ಕರ ನಿವಾಸಕ್ಕೆ ಕೊಂಡೊಯ್ದು ಇರಿಸುವ ಮೂಲಕ; ನೆರ್ಪುಮಾನಿಯಲ್ಲಿ ಬೊಳಕಾಟ್ ನಡೆಯಿತು. ಬಳಿಕ ತೆಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯ ಲಾಯಿತು.
ಶ್ರೀ ಮಂಜುನಾಥನಿಗೆ ಸೇವೆ : ಮರು ದಿವಸ ತಾ. 15 ರಂದು ಮುಟ್ಲು ಗ್ರಾಮದ ಶ್ರೀ ಮಂಜುನಾಥ ದೇವರ ವಾರ್ಷಿಕ ಮಹಾಪೂಜೋತ್ಸವ ನೆರವೇರಿಸಲಾಯಿತು.
ಸೂರ್ಲಬ್ಬಿ ನಾಡಿನವರು ಶ್ರೀ ದೇವರ ಬನಕ್ಕೆ ತೆರಳುವ ಮಾರ್ಗ ಶುದ್ಧೀಕರಿಸಿ; ಭಂಡಾರ ಮನೆಯಿಂದ ದೇವರ ಆಭರಣಗಳನ್ನು ಬನಕ್ಕೆ ಕೊಂಡೊಯ್ಯುವ ಮುಖಾಂತರ; ವಿಶೇಷ ಪೂಜೆಯೊಂದಿಗೆ ಹರಕೆ ಕಾಣಿಕೆ ಸಲ್ಲಿಸಲಾಯಿತು. ಆ ಬಳಿಕ ಭಂಡಾರವನ್ನು ಮರಳಿ ತಂದು ಚಿಲ್ಲಜಮ್ಮಂಡ ತಕ್ಕರ ಮನೆಯಲ್ಲಿ ಇರಿಸಲಾಯಿತು. ವಾರ್ಷಿಕ ಉತ್ಸವ ಪ್ರಯುಕ್ತ ಅನ್ನದಾನ ನೆರವೇರಿತು. ಆ ಬಳಿಕ ನೆರ್ಪುಮಕ್ಕಿ ಮಂದ್‍ನಲ್ಲಿ ಬೊಳಕಾಟ್ ಸಹಿತ ತೆಂಗಿನಕಾಯಿಗೆ ಗುಂಡು ಹಾರಿಸುವದರೊಂದಿಗೆ ವಾರ್ಷಿಕ ಉತ್ಸವದ ಕಟ್ಟು ಸಡಿಲಿಸಲಾಯಿತು. ದೇವರ ಉತ್ಸವದಲ್ಲಿ ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಹರಕೆ - ಕಾಣಿಕೆ ಸಲ್ಲಿಸುವ ಮುಖಾಂತರ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಮಂಜನಾಥ ದೇವರ ಕೃಪೆಗೆ ಪಾತ್ರದಾರು.
-ಚಿತ್ರ, ವರದಿ : ಕೆ.ಜೆ. ಸುಬ್ಬಯ್ಯ