ಭಾಗಮಂಡಲ, ಫೆ. 17: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚಿನ್ನತಪ್ಪ ಉತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಭಾನುವಾರ ಬೆಳಿಗ್ಗೆ ಬೆಳಗಿನ ಹಬ್ಬದೊಂದಿಗೆ ಉತ್ಸವ ಆರಂಭ ಗೊಂಡಿತು. ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಕೃಷ್ಣನ ಕೊಳಲಿನ ನಾದವನ್ನು ಆಲಿಸಿದರು. ಸೂರ್ಯಾಸ್ತವಾಗುತ್ತಿದ್ದಂತೆ ಸಮೀಪದ ಕಲ್ಲುಹೊಳೆಗೆ ತೆರಳಿದ ಮಂದಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ರಾತ್ರಿ ಎಂಟು ಗಂಟೆಯಿಂದ ಬೆಳಗಿನ ಜಾವ 4ಗಂಟೆಯ ವರೆಗೆ ಧಾರಾಪೂಜೆ ನೆರವೇರಿತು. ಸೋಮವಾರ ಮಧ್ಯಾಹ್ನ ದೇವಾಲಯದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕ ವಾಗಿ ಹೊರತೆಗೆಯಲಾಯಿತು. ಈ ಬಾರಿ ಚಿಗಂಡ ಶಿವಾಜಿ ಕೊಳಲನ್ನು ಎತ್ತಿಕೊಂಡು ನಿರ್ದಿಷ್ಟ ಜಾಗಗಳಲ್ಲಿ ಮೂರು ಬಾರಿ ನುಡಿಸುತ್ತಾ ಬಂದು ಮಧ್ಯಾಹ್ನ 1.15 ರ ವೇಳೆಗೆ ಊರ ಮಂದ್‍ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಬಳಿಕ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತೇರಾಟದೊಂದಿಗೆ ಹೊರಟ ಶ್ವೇತವಸ್ತ್ರಧರಿಸಿದ
(ಮೊದಲ ಪುಟದಿಂದ) ಮಹಿಳೆಯರು ಊರಮಂದ್‍ಗೆ ಆಗಮಿಸಿದರು. ಬಳಿಕ ಊರಮಂದ್‍ನ ಗದ್ದೆಯಲ್ಲಿ ಮೂರು ಸುತ್ತು ಎತ್ತೇರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧ ಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು. ಈ ಸಂದರ್ಭ ಆಕಾಶದಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣೆ ಮಾಡಿತು. ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವುದ ರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾ ಯಿತು. ಚಿನ್ನತಪ್ಪ ಉತ್ಸವದಲ್ಲಿ ಅಯ್ಯಂಗೇರಿ ಗ್ರಾಮದ ಅಧಿಕ ಸಂಖ್ಯೆಯ ಗೊಲ್ಲಜನಾಂಗ ಬಾಂಧವರೊಂದಿಗೆ ಗ್ರಾಮದ 14 ಕುಲದವರು ಭಾಗಿಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಷ್ ಕಾರ್ಯನಿರ್ವಹಿಸಿದರು. ತಾ. 18 ರಂದು (ಇಂದು) ಭಂಡಾರ ಹಾಕುವ ಕಾರ್ಯಕ್ರಮ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.
-ಸುನಿಲ್‍ಕುಯ್ಯಮುಡಿ