ಶ್ರೀಮಂಗಲ, ಫೆ. 17: ದ.ಕೊಡಗಿನಲ್ಲಿ ಹುಲಿಯ ಅಟ್ಟಹಾಸಕ್ಕೆ ದಿನನಿತ್ಯ ಜಾನುವಾರುಗಳು ಬಲಿಯಾಗುತ್ತಿದ್ದು, ಕಳೆದ ಮೂರು ದಿನಗಳಿಂದ 3 ಜಾನುವಾರು ಬಲಿಯಾಗಿದ್ದು, ಒಂದು ಜಾನುವಾರು ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದೆ. ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ಭಾನುವಾರ ರಾತ್ರಿ ರೈತ ತೀತಿರ ಸಿ.ಮಾದಪ್ಪ (ಮಿಟ್ಟು) ಅವರ ಮನೆಯ ಸಮೀಪ ಕಟ್ಟಿದ್ದ ಮಿಶ್ರತಳಿಯ ಗಬ್ಬದ ಹಸುವಿನ ಮೇಲೆ ದಾಳಿ ಮಾಡಿ ಕೊಂದಿರುವ ಹುಲಿ ಕಟ್ಟಿದ್ದ ಸ್ಥಳದಿಂದ ಹಗ್ಗವನ್ನು ತುಂಡರಿಸಿ ಸುಮಾರು 60 ಅಡಿ ದೂರಕ್ಕೆ ಎಳೆದೊಯ್ದಿದೆ.ಈ ಸಂದರ್ಭ ದಿಬ್ಬದ ಮೇಲಕ್ಕೆ ಎಳೆದೊಯ್ಯಲು ಸಾಧ್ಯವಾಗದ ಹಿನ್ನೆಲೆ ಮತ್ತೆ ಕರುವನ್ನು ಕಟ್ಟಿದ್ದ ಸ್ಥಳಕ್ಕೆ ಆಗಮಿಸಿ ಕರುವನ್ನು ಕೊಂದು ಸಮೀಪದ ಕಾಫಿ ತೋಟಕ್ಕೆ ಎಳೆದೊಯ್ದಿದೆ. ಕರುವನ್ನು ಸುಮಾರು 200 ಅಡಿ ದೂರಕ್ಕೆ ಎಳೆದೊಯ್ದು ಅರ್ಧ ಭಾಗವನ್ನು ತಿಂದಿರುವುದು ಪತ್ತೆಯಾಗಿದೆ.ಹರಿಹರ ಗ್ರಾಮದ ಒತ್ತಿನಲ್ಲಿರುವ ಬೆಳ್ಳೂರು ಗ್ರಾಮದಲ್ಲಿ ತಾ. 15 ರ ಶನಿವಾರ ಸಂಜೆ ರೈತ ಗೋಪಾಲ ಅವರ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಭಾನುವಾರ ಹಗಲು ಹರಿಹರ ಗ್ರಾಮದ ರೈತ ಮುಕ್ಕಾಟೀರ ಪೆಮ್ಮಯ್ಯ ಅವರು ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಹಸುವನ್ನು ತೀವ್ರತರದಲ್ಲಿ ಗಾಯಗೊಳಿಸಿದೆ. ಭಾನುವಾರ ನಡೆದ ಘಟನೆಯ ಸ್ಥಳದಿಂದ ಕೇವಲ 1-2 ಕಿ.ಮಿ. ದೂರದಲ್ಲಿ ಭಾನುವಾರ ರಾತ್ರಿ ರೈತ ತೀತಿರ ಮಾದಪ್ಪ ಅವರ ಹಸು ಹಾಗೂ ಕರುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷ ಮಚ್ಚಮಾಡ ಸುಮಂತ್ ಅವರು ದಿನನಿತ್ಯ ಹುಲಿ ದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿದೆ. ಇನ್ನೊಂದೆಡೆ ಹುಲಿ ಹಾವಳಿಯಿಂದ ಕಾಫಿ ತೋಟದಲ್ಲಿ ಕಾಫಿ ಮತ್ತು ಕರಿಮೆಣಸು ಕೊಯ್ಲು ಸಮಯದಲ್ಲಿ ಕೆಲಸ ಮಾಡಲು ಭಯದ ವಾತಾವರಣ ಉಂಟಾಗಿದೆ. ತೋಟಕ್ಕೆ ನೀರು ಹಾಯಿಸುವ ಸಮಯ ವಾಗಿದ್ದು, ಹಗಲು ರಾತ್ರಿ ಬೆಳೆಗಾರರು ಕೆಲಸದಲ್ಲಿ ನಿರತರಾಗಿರುತ್ತಾರೆ. ಇದೀಗ ಹುಲಿ ಹಾವಳಿಯಿಂದ ಜಾನುವಾರುಗಳು ಹಾಗೂ ನಾಗರಿಕರು ಆತಂಕ ಪಡುವಂತಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ತಿತಿಮತಿ ವಿಭಾಗದ

(ಮೊದಲ ಪುಟದಿಂದ) ಎಸಿಎಫ್ ಶ್ರೀಪತಿ ಅವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಹಲವು ತಿಂಗಳಿನಿಂದ ನಿರಂತರ ಹುಲಿ ದಾಳಿ ದ.ಕೊಡಗಿನ ವಿವಿಧೆಡೆ ನಡೆಯುತ್ತಿದೆ. ಆದರೆ, ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಪ್ರಾಮಾಣಿಕ ಕಾಳಜಿ ವ್ಯಕ್ತವಾಗುತ್ತಿಲ್ಲ. ಜನರ ಕಣ್ಣೋರೆಸುವ ತಂತ್ರವಾಗಿ ಹುಲಿ ಸೆರೆಗೆ ಬೋನ್ ಇರಿಸಲಾ ಗುತ್ತಿದೆ ಎಂದು ಆರೋಪಿಸಿದರು.

ವೀರಾಜಪೇಟೆ ಡಿಎಫ್‍ಓ ಶಿವಶಂಕರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸುಮಂತ್ ಮತ್ತು ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಅವರು ತಕ್ಷಣದಿಂದಲೇ ಹುಲಿ ಸೆರೆಗೆ ಅಗತ್ಯ ಕಾರ್ಯಾಚರಣೆ ಕೈಗೊಳ್ಳಬೇಕು. ಅದಕ್ಕೂ ಮೊದಲು ಹುಲಿ ಸೆರೆಗೆ ಸೂಕ್ತ ಅನುಮತಿಯನ್ನು ಅರಣ್ಯ ಇಲಾಖೆ ಪಡೆದುಕೊಳ್ಳಬೇಕು. ಒಂದು ವೇಳೆ ನಾಟಕೀಯವಾಗಿ ಹುಲಿ ಸೆರೆಗೆ ಪ್ರಯತ್ನಿಸಿ ಮತ್ತೆ ಹುಲಿ ದಾಳಿ ಮರುಕಳಿಸಿದರೆ ಮೇಲಾಧಿಕಾರಿಗಳ ಕಛೇರಿಯ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಮೇಲಾಧಿಕಾರಿಗಳೊಂದಿಗೆ ಮಾತನಾಡಿದ ಶ್ರೀಪತಿಯವರು ಇಂದಿನಿಂದಲೇ ಹುಲಿ ಸೆರೆಗೆ ಅರವಳಿಕೆಯ ಗುಂಡು ಹಾರಿಸಿ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗುವುದು, ಅಗತ್ಯವಾದರೆ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು. ಅಲ್ಲದೆ, ಜಾನುವಾರು ಕಳೆದುಕೊಂಡ ರೈತ ಮಾದಪ್ಪ ಅವರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳದಲ್ಲಿ ಹುಲಿಯ ಚಲನ ವಲನಕ್ಕೆ 5 ಕ್ಯಾಮರಾ ಅಳವಡಿಸಲಾಗಿದೆ.

ಕಾರ್ಯಾಚರಣೆ: ತಿತಿಮತಿ ಮತ್ತು ಪೊನ್ನಂಪೇಟೆಯ ಅರಣ್ಯ ಇಲಾಖೆಯ ಸುಮಾರು 20 ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಜಾನುವಾರುವಿನ ಮರಣೋತ್ತರ ಪರೀಕ್ಷೆ ನಡೆಸಿದ ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಮಾತನಾಡಿ; ಕಳೆದ 3 ದಿನದಿಂದ 4 ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, 3 ಜಾನುವಾರು ಬಲಿಯಾಗಿವೆ. 1 ಗಂಭೀರ ಗಾಯಗೊಂಡಿದೆ. ಇವೆಲ್ಲವನ್ನು ಪರಿಶೀಲಿಸಿದಾಗ ಸುಮಾರು 5 ಕಿ.ಮಿ. ಸುತ್ತಳತೆಯಲ್ಲಿ ನಡೆದಿದೆ. ಒಂದೇ ಹುಲಿ ದಾಳಿ ನಡೆಸಿರುವ ಸಾಧ್ಯತೆ ಹೆಚ್ಚಾಗಿದೆ. ಗಾಯವಾಗಿರುವುದನ್ನು ಪರಿಶೀಲಿಸಿದಾಗ ಹುಲಿಯ ಬಲಭಾಗದ ಕೆಳಗಡೆಯ ಹಲ್ಲಿನ ಗಾಯ ಹೆಚ್ಚು ಆಳಕ್ಕೆ ಹೋಗುತ್ತಿಲ್ಲ, ಮೂರು ದಿನದಿಂದ ನಡೆದ 4 ಪ್ರಕರಣದಲ್ಲಿಯೂ ಇದೇ ರೀತಿ ಗಾಯವಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.

ಗೋಣಿಕೊಪ್ಪಲು: ದ.ಕೊಡಗಿನಲ್ಲಿ ಕಳೆದ ಎರಡು ತಿಂಗಳಿನಿಂದ ಎರಡು ದಿನಗಳಿಗೊಮ್ಮೆ ಜಾನುವಾರುಗಳು ಹುಲಿಯ ಬಾಯಿಗೆ ಆಹಾರವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲಿಕಿರುವುದನ್ನು ಮನಗಂಡು ಹುಲಿ ಸೆರೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಮೈಸೂರಿನ ಅರಣ್ಯ ಭವನದಲ್ಲಿ ಸಿಸಿಎಫ್ ಹೀರಲಾಲ್ ಹಾಗೂ ನಾಗರಹೊಳೆ ವನ್ಯ ಜೀವಿ ವಿಭಾಗದ ಡಿಎಫ್‍ಒ ಪೂವಯ್ಯ ಅವರನ್ನು ಭೇಟಿ ಮಾಡಿ ಹುಲಿ ಸೆರೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಮನುಸೋಮಯ್ಯನವರು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ದ.ಕೊಡಗಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ರೈತ ಮುಖಂಡರ ಮಾತಿಗೆ ಮನ್ನಣೆ ನೀಡಿದ ಹಿರಿಯ ಅಧಿಕಾರಿ ಹೀರಲಾಲ್ ಐದು ದಿನಗಳ ಒಳಗೆ ಹುಲಿಯನ್ನು ಸೆರೆ ಹಿಡಿಯಲಾಗುವುದು; ಈ ಬಗ್ಗೆ ಈಗಿನಿಂದಲೇ ಕ್ರಮ ಕೈಗೊಳ್ಳುತ್ತೇವೆ. ಜಾನುವಾರು ಕಳೆದುಕೊಂಡ ಕುಟುಂಬಗಳಿಗೆ 70 ಸಾವಿರ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆನೆ ಧಾಳಿಯಲ್ಲಿ ಮಾನವನ ಪ್ರಾಣ ಹಾನಿಯಾದಲ್ಲಿ 25 ಲಕ್ಷ ಪರಿಹಾರಕ್ಕೆ ಪತ್ರ ಬರೆಯಲಾಗಿದೆ. ಆನೆ ಮಾನವ ಸಂಘರ್ಷದ ಹಾಗೂ ಹುಲಿ ಹಾವಳಿಯ ಸಮಸ್ಯೆಯ ಬಗ್ಗೆ ತಾ. 20ರಂದು ಅಧಿಕಾರಿಗಳ ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ಮಡಿಕೇರಿಯ ಅರಣ್ಯ ಭವನದಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು. ಭೇಟಿಯ ಸಂದರ್ಭ ರೈತ ಮುಖಂಡರಾದ ಹೊಸಕೋಟೆ ಬಸವರಾಜ್, ಪಿ. ಮರಂಕಯ್ಯ, ಚಂದ್ರೆಗೌಡ ಇನ್ನಿತರರು ಇದ್ದರು. -ಹೆಚ್.ಕೆ. ಜಗದೀಶ್ ಸ್ಥಳದಲ್ಲಿ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ತೀರ್ಥ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ ಕುನಗುಂದ್, ಗ್ರಾ.ಪಂ. ಸದಸ್ಯ ಮುಕ್ಕಾಟೀರ ಸಂದೀಪ್, ತೀತಿರ ಕಾಶಿ ಕಾರ್ಯಪ್ಪ, ಸುಜು, ಗಣು, ಸುಬ್ಬಯ್ಯ, ಅಪ್ಪಯ್ಯ, ಅಯ್ಯಪ್ಪ, ಪ್ರಸನ್ನ.ವಿ.ಎನ್ ಹಾಜರಿದ್ದರು. -ಹರೀಶ್ ಮಾದಪ್ಪ