ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದ ನವೀಕರಣ ಪೂಜಾಕೈಂಕರ್ಯವು ತಾ. 24ರ ಸೋಮವಾರದಿಂದ ಪ್ರಾರಂಭಗೊಂಡು ಬುಧವಾರದವರೆಗೆ ನಡೆಯಲಿದೆ.
ಪುರಾತನ ಕಾಲದಲ್ಲಿ ಕಾವೇರಿ ಮಾತೆಯು ಊರಿಗೊಂದು ಪೊವ್ವೋದಿ (ಭಗವತಿ), ಕೇರಿಗೊಂದು ಅಯ್ಯಪ್ಪ ಹಾಗೂ ಓಣಿಗೊಂದು ನಾಗನಂತೆ ನೆಲೆಯಾಗುವಂತೆ ಸೂಚಿಸಿದ ಮೇರೆ ನೂರು ಒಕ್ಕೊಲು ಬೆಟ್ಟದಿಂದ ಮೊದಲನೆ ಬಾಣಬಿಟ್ಟ ಜಾಗದಲ್ಲಿ ಹಿರಿಯಕ್ಕ ಚೇರಳದಲ್ಲೂ, ಎರಡನೆಯವಳು ಶ್ರೀಮಂಗಲದಲ್ಲೂ ಹಾಗೂ ಮೂರನೆಯವಳು ಈರಳೆ ಗ್ರಾಮದಲ್ಲೂ ನೆಲೆನಿಂತರೆಂದು ಊರಿನವರು ಹೇಳುತ್ತಾರೆ. ಹಾಗೆ ನೆಲೆ ನಿಂತವಳೆ ಈ ಶ್ರೀಮಂಗಲ ಪೊವ್ವೋದಿ (ಭಗವತಿ).
ದೇವಾಯಲ ಸಮಿತಿ ಹಾಗೂ ಊರಿನವರ ತೀರ್ಮಾನದಂತೆ ಶ್ರೀಮಂಗಲ ಭಗವತಿ ದೇವಾಲಯದ ಜೀರ್ಣೋದ್ಧಾರಕ್ಕೆ ತೀರ್ಮಾನಿಸಲಾಯಿತು. ದೇವಾಲಯ ಜೀರ್ಣೊದ್ಧಾರ ಸಮಿತಿಯನ್ನು ಮಾಡಲಾಯಿತು. ದೇವಿಯ ವಿಗ್ರಹವನ್ನು ದೇವಾಲಯದ ಸಮೀಪ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನುರಿತ ತಂತ್ರಿಗಳ ಹಾಗೂ ಅರ್ಚಕರ ಸಮ್ಮುಖದಲ್ಲಿ ಊರಿನವರ, ದಾನಿಗಳ ಸಹಾಯಹಸ್ತದಿಂದ ನೂತನ ದೇವಾಲಯ, ತೀರ್ಥಮಂಟಪ, ಕ್ಷೇತ್ರಪಾಲಕನಿಗೆ ಸ್ಥಾನ, ಗಣಪತಿ ಗುಡಿ, ಕಲ್ಲಿನ ದೀಪಸ್ಥಂಭವನ್ನೆಲ್ಲ ನಿರ್ಮಿಸಲಾಯಿತು. ಪವುಳಿ (ಸುತ್ತಂಬಲ) ನಿರ್ಮಾಣಕ್ಕೆ ಹಣಕಾಸಿನ ತೊಂದರೆ ಎದುರಾದ ಸಂದರ್ಭ ಊರಿನ ಕೆಲವು ಯುವಕರು ಮುಂದಾಗಿ ಊರಿನವರ, ದಾನಿಗಳ ದೇಣಿಗೆ ಸಂಗ್ರಹಿಸಿ ಪವುಳಿಯನ್ನು ನಿರ್ಮಿಸಿದ ಫಲವಾಗಿ ಸುಮಾರು 90 ಲಕ್ಷದಲ್ಲಿ ನೂತನ ಶ್ರೀಮಂಗಲ ಶ್ರೀಭಗವತಿ ದೇವಾಲಯ ನಿರ್ಮಾಣವಾಗಿದೆ.
ಕಗ್ಗೋಡ್ಲು ಭಗವತಿ ದೇವಾಲಯ ಅರ್ಚಕ ಶ್ರೀ ರಾಮಚಂದ್ರಭಟ್ ಅವರ ಉಪಸ್ಥಿತಿಯಲ್ಲಿ ಬ್ರಹ್ಮ ಶ್ರೀವೇದಮೂರ್ತಿ ಶುವಾಲಮೂಲೆ ಶ್ರೀಶಿಬ ಸುಬ್ರಮಣ್ಯಭಟ್ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯ ನೆರವೇರಲಿದೆ.
“ಕಳೆದ 4 ವರ್ಷಗಳ ಹಿಂದೆ ಚೆಟ್ಟಳ್ಳಿ ಶ್ರೀಮಂಗಲ ಶ್ರೀಭಗವತಿ ದೇವಾಲಯದ ಜೋರ್ಣೋದ್ಧಾರಕ್ಕೆ ತೀರ್ಮಾನಿಸಿದ್ದು ಊರಿನವರ, ಭಕ್ತರ ಹಾಗೂ ದಾನಿಗಳ ಸಹಕಾರದಿಂದ ದೇವಾಲಯದ ಜೀರ್ಣೋದ್ದಾರ ಕಾರ್ಯ ನೆರವೇರಲಿದೆ. ಶ್ರೀ ಭಗವತಿ ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿ ಮುಳ್ಳಂಡ ಪಿ. ತಿಮ್ಮಯ್ಯ ತಿಳಿಸಿದ್ದಾರೆ
ತಾ. 21ರ ಶುಕ್ರವಾರ ಪೂರ್ವಾಹ್ನ 9 ಗಂಟೆಗೆ ದೇವನೆಲೆಯಲ್ಲಿ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಕಟ್ಟು ಬೀಳಲಿದ್ದು ತಾ. 24ರ ಸೋಮವಾರ ಪೂರ್ವಾಹ್ನ 9 ಗಂಟೆಗೆ ತಂತ್ರಿಗಳ ಆಗಮನ ಕುಂಭ ಸ್ವಾಗತದೊಂದಿಗೆ ಪೂರ್ವಾಹ್ನ 10 ರಿಂದ ಪುಣ್ಯಾಹಗೋನಿವಾಸಸಪ್ತಶುದ್ಧಿ ಮೃತ್ಯುಂಜಯ ಹವನ, ಕೂಷ್ಮಾಂಡೀ ಪ್ರಾಯಶ್ಚಿತ ಅಂಕುರಪೂಜೆ ಪೂರ್ಣಾಹುತಿ, ಪ್ರಸಾದ ವಿತರಣೆ. ಸಂಜೆ 4 ರಿಂದ ರಾಕ್ಷೋಘ್ನಹವನ, ವಾಸ್ತುಪೂಜೆ, ವಾಸ್ತುಹವನ, ವಾಸ್ತುಬಲಿ, ಸುದರ್ಶನಹವನ, ಭಾಧಾಮೂರ್ತಿಗೆ ಉಚ್ಚಾಟನೆ ಪ್ರೇತಾಕರ್ಷಣೆ ಮಂಗಳಾರತಿ ಪ್ರಸಾದ ವಿನಿಯೋಗ.
ತಾ. 25ರ ಬೆಳಿಗ್ಗೆ 7ರಿಂದ ತಿಲಹವನ, ಗಣಪತಿ ಅಥರ್ವಹವನ, ತತ್ವಹೋಮ, ಕವಾಥೋದ್ಬವಪೂಜೆ, ಅಂಕುರಪೂಜೆ, ಪೂರ್ಣಾಹುತಿ ಪ್ರಸಾದ, ಅನ್ನದಾನ. ಸಂಜೆ 4ರಿಂದ ಕಲಶಗಳ ಪ್ರತಿಷ್ಠೆ ಬಿಂಬಗಳ ಶುದ್ಧಿ ಅಧ್ಬುತ ಶಾಂತಿಪಾರಾಯಣಗಣ, ಜಲಾಧಿವಾಸ, ಧಾನ್ಯಾಯದಿವಾಸ ಪೂಜೆ, ಹವನ ಪೂರ್ಣಾಹುತಿ, ಪ್ರಸಾದ ವಿನಿಯೋಗ.
ತಾ. 26ರಂದು ಬೆಳಿಗ್ಗೆ 9ರಿಂದ ಪ್ರತಿಷ್ಠಾಂಗ ಹವನ, ಗಣಪತಿ ಹವನ, ಪೂರ್ಣಾಹುತಿ, ಪೂರ್ವಾಹ್ನ 10ರಿಂದ ಕಲಶಾಭೀಷೇಕ, ಕವಾಥೋದ್ಬವ ಪೂಜೆ, ಅಂಕುರ ಪೂಜೆ. ಪೂರ್ವಾಹ್ನ 11ರ ವೃಷಭ ಲಗ್ನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12.20ಕ್ಕೆ ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನದಾನ ನಡೆಯಲಿ ಎಂದು ಊರತಕ್ಕರು ಹಾಗೂ ದೇವಾಲಯ ಪುನರ್ ನಿರ್ಮಾಣ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
-ಪುತ್ತರಿರ ಕರುಣ್ಕಾಳಯ್ಯ