‘‘ಸಿಕ್ಕಿದಲ್ಲೆಲ್ಲ ಕಸ ಎಸೆಯುತ್ತಾರಲ್ಲ ಈ ಜನರಿಗೆ ಏನಾಗಿದೆ ?’’

ಸಾರ್ವಜನಿಕ ಸ್ಥಳದಲ್ಲಿ ಬಿದ್ದಿದ್ದ ಕಸವನ್ನು ಶ್ರಮದಾನದ ಮೂಲಕ ಶುಚಿ ಗೊಳಿಸುವವರು ಹೀಗೊಂದು ಪ್ರಶ್ನೆಯನ್ನು ಕೇಳದೇ ಇರಲಾರರು.

ಆದರೆ ತಮ್ಮ ಊರಿನ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ದಿನಬೆಳಗಾದರೆ ಊರ ಅಂಗಡಿಗಳ ಹಾಗೂ ಬೀದಿ ಬದಿಯ ಕಸಕಡ್ಡಿ ಗಳನ್ನು ಸ್ವಇಚ್ಛೆಯಿಂದ ಗುಡಿಸಿ ಸ್ವಚ್ಛ ಮಾಡುವ ಇಬ್ಬರು ಅಪರೂಪದ ವ್ಯಕ್ತಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇನೆ. ಒಬ್ಬರು ಹಾಕತ್ತೂರಿನ ಕೊಕ್ಕೇರ ಮಾಚಯ್ಯ, ಇವರಿಗೆ ತಮ್ಮ ಮನೆಯಂತೆ ತನ್ನ ಊರು ಕೂಡ ಸದಾ ಸ್ವಚ್ಛತೆಯಿಂದ ಕೂಡಿರಬೇಕು ಎಂಬ ಹಂಬಲ. ಆದುದರಿಂದ ಅವರು ಬೆಳಗಾದೊಡನೆ ಹಾಕತ್ತೂರಿನ ಮುಖ್ಯ ರಸ್ತೆಗೆ ಬರುತ್ತಾರೆ. ರಸ್ತೆ ಬದಿ ಹಾಗೂ ಅಂಗಡಿಗಳ ಮುಂದೆ ಬಿದ್ದಿದ್ದ ಕಸವನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಹೀಗೆ ಸ್ವಚ್ಛ ಮಾಡುವಾಗ ಕಸ ಹಾಕಿದವರನ್ನು ನಿಂದಿಸುವದಾಗಲಿ, ಮೂದಲಿಸುವದಾಗಲಿ ಮಾಡುವದಿಲ್ಲ, ಯಾವದೇ ಫಲಾಪೇಕ್ಷೆ ಕೂಡ ಇಲ್ಲದೆ ಪೊರಕೆ ಹಿಡಿದು ಪರಿಸರ ಸ್ವಚ್ಛಗೊಳಿಸಿ ಮನೆಗೆ ತೆರಳುತ್ತಾರೆ. ಇದು ಇವರ ದಿನಚರಿಯಾಗಿ ಮುಂದುವರಿದು ಕೊಂಡು ಬಂದಿದೆ. ಹಾಕತ್ತೂರು ಬಸ್ ತಂಗುದಾಣದಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡಬೇಕೆಂಬ ಹಂಬಲ ಕೂಡ ಮಾಚಯ್ಯ ಅವರದಾಗಿದೆ. ಮತ್ತೊಬ್ಬರು ಎಂ. ಎ. ಶೇಷಪ್ಪ. ಇವರು ಕೂಡ ಶುಚಿತ್ವ ಪ್ರಿಯರು. ಕಾಕೋಟುಪರಂಬಿನಲ್ಲಿರುವ ಶೇಷಪ್ಪ ದಿನಬೆಳಗಾದರೆ ಮುಖ್ಯ ರಸ್ತೆಗೆ ಬಂದು ಅಲ್ಲಿನ ಅಂಗಡಿ ಹೊಟೇಲುಗಳ ಮುಂದೆ ಬಿದ್ದಿರುವ ಕಸಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ನಿತ್ಯವೂ ಇವರು ಈ ಕೆಲಸ ಮಾಡುತ್ತಿದ್ದರೂ ಪ್ರತಿ ಫಲವಾಗಿ ಯಾರಿಂದಲೂ ಏನನ್ನೂ ನಿರೀಕ್ಷಿಸುವದಿಲ್ಲ. ಕಸ ಹಾಕಿದವರನ್ನು ದೂಷಿಸುವುದೂ ಇಲ್ಲ. ಪರಿಸರ ಸ್ವಚ್ಛತೆಯಿಂದ ಕೂಡಿರಬೇಕೆಂಬ ಉದ್ದೇಶ ತನ್ನದು ಎಂದಷ್ಟೇ ಹೇಳುವ ಶೇಷಪ್ಪ ಸಾರ್ವಜನಿಕರಲ್ಲಿ ಈ ಜಾಗೃತಿ ಮೂಡಿದಲ್ಲಿ ಇಡೀ ಸಮಾಜವೇ ಸ್ವಚ್ಛತೆಯಿಂದ ಕೂಡಿರುತ್ತದೆ ಎನ್ನುತ್ತಾರೆ.

ಇಷ್ಟಾದರೂ ಈ ಇಬ್ಬರೂ ಒಂದೇ ಊರಿನವರಲ್ಲ ಮಿತ್ರರೂ ಅಲ್ಲ, ಇವರ ಪರಿಸರ ಕಾಳಜಿ ಇತರರಿಗೆ ಮಾದರಿಯಾಗಲಿ ಎಂದು ಹಾರೈಸೋಣ.

ಇತ್ತೀಚೆಗಂತು ಪ್ರಚಾರದ ನಿಟ್ಟಿನಲ್ಲಿ ಒಂದೆರೆಡು ಪ್ಲಾಸ್ಟಿಕ್ ಬಾಟಲ್‍ಗಳನ್ನು ಎತ್ತಿ, ಮಾಧ್ಯಮದವರು ಫೋಟೋ ತೆಗೆಯುವ ತನಕ ಪೋಸ್ ಕೊಡುವ ಹಲವು ಸಂಘ-ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ ಯಾವದೇ ಪ್ರಚಾರ ಬಯಸದೆ ಸ್ವ-ಇಚ್ಚೆಯಿಂದ ಪ್ರತಿನಿತ್ಯ ಶುಚಿತ್ವ ಮಾಡುವ ಈ ಇಬ್ಬರು ಎಲ್ಲರಿಗೂ ಮಾದರಿಯಾಗಲಿ.

-ಬಡುವಂಡ ಕನ್ನು ಅಪ್ಪಚ್ಚು,

ಮೂರ್ನಾಡು.