ಮಡಿಕೇರಿ, ಫೆ. 17: ಎಲ್ಲಾ ಧರ್ಮ ಪಂಥಗಳನ್ನು ಮೀರಿ ಸಾಮಾಜಿಕ ಅಭಿವೃದ್ಧಿಗಾಗಿ ತಮ್ಮ ಬದುಕನ್ನು ಮೀಸಲಿರಿಸಿದವರಲ್ಲಿ ಸಂತ ಸೇವಾಲಾಲ್ ಅವರು ಒಬ್ಬರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಸೇವಾಲಾಲ್, ಬಸವಣ್ಣನವರು, ದೇವರ ದಾಸಿಮಯ್ಯ ಸೇರಿದಂತೆ ಇನ್ನಿತರ ಸಂತರು ತಮ್ಮ ವಚನಗಳನ್ನು ಕೇವಲ ಒಂದು ಸಮುದಾಯಕ್ಕೆ ಮೀಸಲಿಟ್ಟಿಲ್ಲ. ಜೊತೆಗೆ ತಮ್ಮ ಸಮುದಾಯದ ಅಭಿವೃದ್ಧಿಯನ್ನು ಮಾತ್ರವೇ ಬಯಸದೇ ಸಂಪೂರ್ಣ ಸಮಾಜದ ಅಭಿವೃದ್ಧಿಯನ್ನು ಬಯಸಿದವರು. ಸರ್ವರ ಏಳಿಗೆಗಾಗಿ ವಚನಗಳ ಮೂಲಕ ತತ್ವಪದಗಳ ಮೂಲಕ ಸಾಮಾಜಿಕ ಸಂದೇಶವನ್ನು ನೀಡಿದವರು ಎಂದರು.
ಬಳಿಕ ಮಾತನಾಡಿದ ನರಿಯಂದಡ ಕೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮನೋಹರ ನಾಯ್ಕ ಸಂತ ಸೇವಲಾಲ್ ಗೌರವಾರ್ಥವಾಗಿ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಟ್ಟು ಸರ್ಕಾರ ಗೌರವ ಸೂಚಿಸಿದೆ ಎಂದರು.
ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಂತ ಸೇವಾಲಾಲರ ಜೀವನಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಕೆ.ಪಿ., ಭಾಗಮಂಡಲ ಕಾವೇರಿ ಕಾಲೇಜಿನ ಉಪನ್ಯಾಸಕ ಹನುಮಂತ ನಾಯ್ಕ, ಶಿಕ್ಷಕರಾದ ರಮೇಶ್ ನಾಯ್ಕ, ಸೋಮಶೇಖರ್ ನಾಯ್ಕ ಸೇರಿದಂತೆ ಇತರರು ಇದ್ದರು. ಮೈಸೂರಿನ ಡಾ. ರಾಘವೇಂದ್ರ ಪ್ರಸಾದ್ ಮತ್ತು ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಸ್ವಾಗತಿಸಿ, ವಂದಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು.