ಕುಶಾಲನಗರ, ಫೆ. 15: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬೆಂಕಿಯಿಂದ ಹಾನಿಗೊಳಗಾದ ಗಿಡಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಕೆಲವು ಕಿಡಿಗೇಡಿಗಳು ಗಿಡಗಳಿಗೆ ಬೆಂಕಿ ಹಾಕಿ ಹಾನಿಗೊಳಿಸಿದ ಬಗ್ಗೆ ಶಕ್ತಿಯಲ್ಲಿ ವರದಿಯಾದ ಬೆನ್ನಲ್ಲೇ ಸ್ಪಂದಿಸಿದ ಅರಣ್ಯ ವಲಯಾಧಿಕಾರಿ ಅನನ್ಯಕುಮಾರ್ ಸೂಚನೆ ಮೇರೆಗೆ ಉಪ ಅರಣ್ಯ ವಲಯಾಧಿಕಾರಿ ಮಹದೇವ್ ನೇತೃತ್ವದಲ್ಲಿ ಸಿಬ್ಬಂದಿಗಳು ಟ್ರಾಕ್ಟರ್‍ನಲ್ಲಿ ನೀರು ತಂದು ಗಿಡಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಶಗೊಂಡ ಗಿಡಗಳ ಬದಲಾಗಿ ಆ ಸ್ಥಳದಲ್ಲಿ ಇತರ ಗಿಡಗಳನ್ನು ನೆಟ್ಟು ಬೆಳೆಸುವುದಾಗಿ ಮಹದೇವ್ ಶಕ್ತಿಗೆ ತಿಳಿಸಿದ್ದಾರೆ.