ಮಡಿಕೇರಿ, ಫೆ. 15: ಚೆಸ್ಕಾಂ ವತಿಯಿಂದ ಮಡಿಕೇರಿ ಉಪ ವಿಭಾಗದ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಯಿತು.
ಜನಸಂಪರ್ಕ ಸಭೆಯಲ್ಲಿ ಕೆಲವು ಗ್ರಾಹಕರ ದೂರಿನಂತೆ ಜನಸಾಮಾನ್ಯರಿಗೆ ಹೊರೆ ಆಗುವಂತಹ ಅಭಿವೃದ್ಧಿ ಶುಲ್ಕವನ್ನು ವಿಧಿಸಿರುವುದನ್ನು ಪ್ರಸ್ತಾಪಿಸಿದಾಗ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹದೇವಯ್ಯ ಅವರು ಕೆ.ಇ.ಆರ್.ಸಿ. ಆದೇಶದಂತೆ ಈ ಶುಲ್ಕವನ್ನು ವಿಧಿಸಿರುವುದಾಗಿ ತಿಳಿಸಿದರು.
ಈ ವೇಳೆ ವಿದ್ಯುತ್ ಗುತ್ತಿಗೆದಾರರ ಸಂಘವು ಆಕ್ಷೇಪ ವ್ಯಕ್ತಪಡಿಸಿತು. ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ ಮಾತನಾಡಿ, ಸಾರ್ವಜನಿಕರ ಪರವಾಗಿ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕೆ.ಇ.ಆರ್.ಸಿ. ದರ ಪರಿಸ್ಕರಣೆ ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿದ್ದು, ಜಿಲ್ಲಾ ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ ಅವರು ಕೆ.ಇ.ಆರ್.ಸಿ. ಸಭೆಯಲ್ಲಿ ಹಾಲಿ ವಿದ್ಯುತ್ ಮಾರ್ಗವಿರುವ ಸ್ಥಳಗಳಲ್ಲೂ ವಿದ್ಯುತ್ ಸಂಪರ್ಕಪಡೆಯಲು, ಕೊಡಗಿನಲ್ಲೂ ಪ್ರತಿ ಕಿ.ವ್ಯಾಟ್ಗೆ ರೂ. 5750 ರಂತೆ ಗ್ರಾಮಾಂತರ ಪ್ರದೇಶದಲ್ಲೂ ರೂ. 6,500 ನಂತೆ ಪಟ್ಟಣ ಪ್ರದೇಶಗಳಲ್ಲಿ ವಸೂಲಿ ಮಾಡುತ್ತಿರುವುರಿಂದ ಆಗುವ ತೊಂದರೆ ಬಗ್ಗೆ ಕೆ.ಇ.ಆರ್.ಸಿ. ಆಯೋಗದ ಅಧ್ಯಕ್ಷ ಶಂಭು ದಯಾಲ್ ಮೀನ ಅವರ ಬಳಿ ಪ್ರಸ್ತಾಪಿಸಿದ್ದು, ಅದಕ್ಕೆ ಉತ್ತರಿಸಿದ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಅವರು ಅಭಿವೃದ್ಧಿ ಶುಲ್ಕ ಲೇಔಟ್ಗಳಿಗೆ ಮಾತ್ರ ಬರುತ್ತದೆ ಎಂದು ಮೌಖಿಕವಾಗಿ ಹೇಳಿದ್ದಾರೆ ಎಂದು ಮಾಹಿತಿಯಿತ್ತರು.
ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಗ್ಗೆ ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆಂದು ಮನವಿ ಮಾಡಿದರು.