*ಮಡಿಕೇರಿ, ಫೆ. 14: 2018.19 ಸಾಲಿನ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಮನೆ ಹಂಚಿಕೆ ಸಂದರ್ಭದಲ್ಲಿ ಲೋಪವಾಗಿರುವ ಬಗ್ಗೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ಸಂತ್ರಸ್ತರಾದ ನಗರ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮೊದಲನೇ ಪಟ್ಟಿಯಲ್ಲಿ ಮನೆಯ ಹಂಚಿಕೆಯಾಗಿದ್ದು, ಇದರಲ್ಲಿ ನೈಜ ಸಂತ್ರಸ್ತರ ಹೆಸರನ್ನು ಕೈಬಿಟ್ಟು ಎರಡನೇ ಪಟ್ಟಿಯಲ್ಲಿರುವ ಸಂತ್ರಸ್ತರನ್ನು ಮೊದಲನೇ ಪಟ್ಟಿಗೆ ಸೇರಿಸಿದ್ದು ಮೊದಲನೇ ಪಟ್ಟಿಯಲ್ಲಿ ತೀವ್ರ ಹಾನಿಯಾಗಿರುವ ಸಂತ್ರಸ್ತರ ಹೆಸರನ್ನು 2ನೇ ಪಟ್ಟಿಗೆ ಸೇರಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಯಾರು ನೈಜ ಸಂತ್ರಸ್ತರು ಅವರನ್ನು ಮೊದಲನೇ ಪಟ್ಟಿಗೆ ಸೇರಿಸಿ ಎಂದು ಮನವಿ ಮಾಡುವುದರೊಂದಿಗೆ ಒಂದೇ ದಾಖಲೆಗೆ ಇಬ್ಬರಿಗೆ 95,000 ಸಾವಿರ ರೂ ಚೆಕ್ ವಿತರಣೆ ಮಾಡಿರುವ ಬಗ್ಗೆ ಹಾಗೂ ಅದೇ ದಾಖಲೆಗೆ 2 ಮನೆ ವಿತರಣೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಜ್ಯೋತಿ ನಗರ, ಇಂದಿರಾನಗರದಲ್ಲಿ ಮನೆ ನಿರ್ಮಾಣ ಮಾಡಿಕೊಂಡು 20-25 ವರ್ಷಗಳಿಂದ ವಾಸಮಾಡುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಒಂದೇ ದಾಖಲೆಗೆ ಎರಡು ಮನೆ ಮತ್ತು ಚೆಕ್ ನೀಡಿರುವುದರ ಬಗ್ಗೆ ತನಿಖೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮನವಿ ಸಲ್ಲಿಸುವ ವೇಳೆ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ, ಕಾರ್ಯದರ್ಶಿ ಮಿನಾಸ್, ಪ್ರವೀಣ್, ನಾಗೇಶ್, ರೀಟಾ, ಲಿಲ್ಲಿ, ಯಮುನಾ, ಮಂಜುಳಾ, ಪೂರ್ಣಿಮಾ, ಸತೀಶ್ ಪೈ, ವಿಕ್ರಂ ಶೆಟ್ಟಿ ಹಾಗೂ ಸಂತ್ರಸ್ತರು ಹಾಜರಿದ್ದರು.