ಕುಶಾಲನಗರ, ಫೆ 14: ಜಿಲ್ಲೆಯ ವಿವಿಧೆಡೆ ಆನೆ-ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದರೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ವಲಸೆ ಪಕ್ಷಿಗಳು ಮತ್ತು ಕೆಲವು ಮಾನವರ ನಡುವೆ ಕಳೆದ ಕೆಲವು ದಿನಗಳಿಂದ ವಿಶಿಷ್ಟ ರೀತಿಯ ಸಂಘರ್ಷ ನಡೆಯುತ್ತಿರುವುದು ಕಂಡುಬಂದಿದೆ.
ಕುಶಾಲನಗರ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸ್ಥಳೀಯ ಕಾವೇರಿ ಪರಿಸರ ಸಂರಕ್ಷಣಾ ಬಳಗ ಕೆಲವು ಗಿಡಗಳನ್ನು ನೆಟ್ಟು ಬೆಳೆಸಿ ಇದೀಗ ಬೃಹದಾಕಾರವಾಗಿ ಬೆಳೆದು ಜನರಿಗೆ ನೆರಳು ನೀಡುತ್ತಿವೆ. ಇನ್ನೊಂದೆಡೆ ಪ್ರಾಣಿ ಪಕ್ಷಿಗಳಿಗೂ ಕೂಡ ನೆಲೆ ಕಲ್ಪಿಸುವುದರೊಂದಿಗೆ ಅವುಗಳ ಸಂತಾನ ಅಭಿವೃದ್ಧಿ ಕಾರ್ಯ ಕೂಡ ನಿರಂತರವಾಗಿ ನಡೆಯುವುದರೊಂದಿಗೆ ಪಕ್ಷಿಗಳ ಕಲರವ ಸುತ್ತಮುತ್ತ ಜನರಿಗೆ ಆಹ್ಲಾದ ನೀಡುತ್ತಿದೆ. ಆದರೆ ಈ ಮರದ ನೆರಳಿನಲ್ಲಿ ಕಳೆದ ಕೆಲವು ವರ್ಷಗಳಿಂದ ವ್ಯಾಪಾರ ಮಾಡಿ ಬದುಕು ಕಂಡುಕೊಂಡವರಿಗೆ ಮಾತ್ರ ಈ ಪಕ್ಷಿಗಳಿಂದ ತೊಂದರೆ ಉಂಟಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಪಕ್ಷಿಗಳು ಗೂಡು ಕಟ್ಟಿ ತಮ್ಮ ಸಂತಾನಾಭಿವೃದ್ಧಿ ಮಾಡುವ ಸಂದರ್ಭ ಮೇಲ್ಭಾಗದಿಂದ ಪಕ್ಷಿಗಳ ಹಿಕ್ಕೆಗಳು ಕೆಳಗೆ ಬೀಳುತ್ತಿದ್ದು ಇದರಿಂದ ವಾಸನೆ ಬರುತ್ತಿದೆ, ಇನ್ನು ಕೆಲವರಿಗೆ ತಮ್ಮ ವಾಹನಗಳಿಗೆ ನೆರಳು ನೀಡುತ್ತಿರುವ ಮರದ ಮೇಲಿಂದ ಗಲೀಜು ಬೀಳುತ್ತದೆ ಎನ್ನುವ ಸಮಸ್ಯೆಗಳೊಂದಿಗೆ ಪಕ್ಷಿಗಳನ್ನು ಮತ್ತು ಗಿಡಗಳನ್ನು ತೆರವುಗೊಳಿಸಲು ಮೊರೆಯಿಡುತ್ತಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ.
ತಮ್ಮ ಬದುಕಿಗೆ ಮತ್ತು ತಮ್ಮ ವಾಹನಗಳಿಗೆ ಶಾಶ್ವತ ನೆರಳು ಕಲ್ಪಿಸುವ ಮರಗಳ ಬುಡವನ್ನೇ ಕೀಳುವ ಯೋಜನೆ ಹಾಕುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವೇನೆಂದರೆ ಕಳೆದ ಕೆಲವು ವರ್ಷಗಳಿಂದ ಕುಶಾಲನಗರ ಬಸ್ ನಿಲ್ದಾಣ ಆವರಣದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಮರಗಳಲ್ಲಿ ಡಿಸೆಂಬರ್ ಅಂತ್ಯವಾಗುತ್ತಲೇ ನೂರಾರು ಪಕ್ಷಿಗಳು ವಲಸೆ ಬಂದು ಗೂಡು ಕಟ್ಟಿ ಸಂತಾನಾಭಿವೃದ್ಧಿಗೊಳಿಸುವುದು ವಾಡಿಕೆಯಾಗಿದೆ. ಮರಿಗಳು ರೆಕ್ಕೆ ಪುಕ್ಕ ಬೆಳೆದು ಹಾರಲು ತಯಾರಾಗುತ್ತಲೇ ಇಲ್ಲಿಂದ ತಮ್ಮ ಮೂಲಸ್ಥಾನಕ್ಕೆ ವಾಪಾಸಾಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಪ್ರಕೃತಿಯ ಈ ನೈಸರ್ಗಿಕ ಪ್ರಕ್ರಿಯೆಗೆ ಹೊಂದಿಕೊಳ್ಳಲಾಗದ ಕೆಲವರು ಮಾತ್ರ ದಿನನಿತ್ಯ ಹಿಡಿಶಾಪ ಹಾಕುವುದರೊಂದಿಗೆ ಪಕ್ಷಿಗಳನ್ನು ತೆರವುಗೊಳಿಸಲು ಹಂಬಲಿಸುತ್ತಿರುವುದು ನಿಜಕ್ಕೂ ಅಮಾನವೀಯ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಜನರಿಗೆ ಪಕ್ಷಿಗಳಿಂದ ತೊಂದರೆಯಾದಲ್ಲಿ ಬೇರೆಡೆಗೆ ತೆರಳಿ ವ್ಯಾಪಾರ ನಡೆಸಲಿ ಎಂದು ಪರಿಸರಪ್ರೇಮಿ ಹಾ.ತಿ.ಜಯಪ್ರಕಾಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭ ಈ ಮರಗಳನ್ನು ಅಥವಾ ವಲಸೆ ಬಂದಿರುವ ಪಕ್ಷಿಗಳನ್ನು ತೆರವುಗೊಳಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಶ್ಯಾಂಶೆಟ್ಟಿ ಮೂಲಕ ಭರವಸೆ ವ್ಯಕ್ತಪಡಿಸಿದ್ದಾರೆ.
-ವರದಿ: ಚಂದ್ರಮೋಹನ್