ಸೋಮವಾರಪೇಟೆ,ಫೆ.14: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. 3 ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ದೊಡ್ಡತೋಳೂರು ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿ (1.20ಕೋಟಿ) ಹಾಗೂ ಚಿಕ್ಕತೋಳೂರು-ತೋಳೂರುಶೆಟ್ಟಳ್ಳಿ ಮುಖ್ಯರಸ್ತೆ ಅಭಿವೃದ್ಧಿ (1.25 ಕೋಟಿ) ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಇದರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ದೊಡ್ಡಮನೆಕೊಪ್ಪ ರಸ್ತೆ ದುರಸ್ತಿ, ಕೂತಿ ಸಬ್ಬಮ್ಮ ದೇವರ ಕೆರೆಯಿಂದ ಹೊಸಮನೆ ವಠಾರ ರಸ್ತೆ, ದೊಡ್ಡತೋಳೂರು ಕೆಂಪಣ್ಣ ಕೆರೆ ರಸ್ತೆ ಡಾಂಬರೀಕರಣ, ಚಿಕ್ಕತೋಳೂರು-ಕೌಕೋಡಿ ರಸ್ತೆ, ಕೂತಿ-ಎಡದಂಟೆ ರಸ್ತೆ ಅಭಿವೃದ್ಧಿ, ದೊಡ್ಡಮನೆಕೊಪ್ಪ ರಸ್ತೆಯ ಹತ್ತಿರ ತಡೆಗೋಡೆ ನಿರ್ಮಾಣ, ರೂ. 8ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ತೋಳೂರು ಶೆಟ್ಟಳ್ಳಿ-ವನಗೂರುಕೊಪ್ಪ ರಸ್ತೆ, ಕೂತಿರಸ್ತೆಯಿಂದ ಸಿಂಗನಳ್ಳಿ ರಸ್ತೆ, 10ಲಕ್ಷ ವೆಚ್ಚದ ಕೂತಿ ಗ್ರಾಮದ ಅಂಗನವಾಡಿ ದುರಸ್ತಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸದಸ್ಯ ಧರ್ಮಪ್ಪ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಗ್ರಾ.ಪಂ. ಅಧ್ಯಕ್ಷೆ ಭಾರತಿ, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಮಹೇಶ್, ಉಮೇಶ್, ರಮೇಶ್, ಸುಧಾಕರ್, ಶೇಖರ್, ಕುಶಾಲಪ್ಪ, ಪ್ರದೀಪ್, ರಜಿತ್, ರಾಜಗೋಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.