ಮಡಿಕೇರಿ, ಫೆ. 14: 2019-20 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಅಧಿಕೃತವಾದ ಮನೆಗಳಿಗೆ ಈಗಾಗಲೇ ಬಾಡಿಗೆ ಮೊತ್ತವನ್ನು ಪಾವತಿಸಲಾಗಿದೆ. ಅದೇ ರೀತಿ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಎ ಮತ್ತು ಬಿ ವೃಂದದ ಪಟ್ಟಿಯಲ್ಲಿರುವ ಮನೆಗಳಿಗೆ ಬಾಡಿಗೆ ಹಣವನ್ನು ಪಾವತಿಸುವ ಬಗ್ಗೆ ತಾ. 10 ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಆದ್ಯತೆಯನ್ನು ನೀಡಿ ತಿಂಗಳಿಗೆ ರೂ.5000 ದಂತೆ ಗರಿಷ್ಠ 10 ತಿಂಗಳಿಗೆ ರೂ.50,000 ಬಾಡಿಗೆ ಹಣವನ್ನು ಪಾವತಿಸಲು ತೀರ್ಮಾನಿಸಲಾಗಿತ್ತು.

ಅದರಂತೆ ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಒಟ್ಟು 228 ಎ ಮತ್ತು ಬಿ ವೃಂದದ ಮನೆಗಳ ಮಾಲೀಕರುಗಳಿಗೆ ಮೊದಲನೇ ಹಂತದಲ್ಲಿ ಒಟ್ಟು 5 ತಿಂಗಳ ಬಾಡಿಗೆ ಹಣ ತಲಾ ರೂ.25000 ದಂತೆ ಒಟ್ಟು ರೂ.57,00,000 ಮೊತ್ತವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪಾವತಿಸಲಾಗಿದೆ.

ಉಳಿದ 5 ತಿಂಗಳ ಬಾಡಿಗೆ ಹಣವನ್ನು ಮುಂದಿನ ದಿನಗಳಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು. ಹಾಗೆಯೇ ಹಾನಿಗೊಳಗಾದ ಅನಧಿಕೃತ ಮನೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಸಂಬಂಧಪಟ್ಟ ಫಲಾನುಭವಿಗಳು ಅವರವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳಲು ಜಿಲ್ಲಾಡಳಿತ ಕೋರಿದೆ.