ಮಡಿಕೇರಿ, ಫೆ.14 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಡಿಸೆಂಬರ್ ಅಂತ್ಯದೊಳಗಾಗಿ ಸುವರ್ಣ ಮಹೋತ್ಸವವನ್ನು ಆಚರಿಸ ಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕವು ಇದುವರೆಗೆ 14 ಜಿಲ್ಲಾ ಸಮ್ಮೇಳನಗಳನ್ನು ನಡೆಸಿದ್ದು, ಈ ಬಾರಿಯ ಜಿಲ್ಲಾ ಸಮ್ಮೇಳನ ಕೊಡಗಿನ ಗಡಿಭಾಗದ ನಿಡ್ತ ಗ್ರಾಮದಲ್ಲಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶವಾದ ನಿಡ್ತದ ಸುತ್ತಮುತ್ತಲ ಗ್ರಾಮಗಳ ಜನರು ಇದನ್ನು ‘ನಿಡ್ತ ಹಬ್ಬ’ವನ್ನಾಗಿ ಆಚರಿಸಿದ್ದು, ಸಾಹಿತ್ಯ ಸಮ್ಮೇಳನದಿಂದಾಗಿ ನಿಡ್ತ ಗ್ರಾಮದ ವಿಶೇಷತೆಗಳು ಹೊರ ಜಗತ್ತಿಗೆ ತಿಳಿಯುವಂತಾಗಿದೆ ಎಂದರು.

ಸಾಹಿತಿಗಳು ಗ್ರಾಮೀಣ ಪ್ರದೇಶಕ್ಕೆ ತೆರಳಿದರೆ ಅವರ ಸಾಹಿತ್ಯ ಕೃತಿಗೆ ಬೇಕಾದ ಅನೇಕ ವಿಷಯಗಳು ಲಭ್ಯವಾಗುತ್ತವೆ ಎಂಬ ಕಾರಣಕ್ಕೆ ಕಸಾಪ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲೇ ಜಿಲ್ಲಾ ಸಮ್ಮೇಳನಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಹೇಳಿದ ಅವರು, ನಿಡ್ತದಲ್ಲಿ ನಡೆದ ಸಮ್ಮೇಳನದಿಂದಾಗಿ ಆ ಊರಿನ ಮಹಿಳೆಯರು, ಸಾರ್ವಜನಿಕರು ಇನ್ನೂ ಸಂಸ್ಕøತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಗೋಚರಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿರುವ ಕಲೆಯನ್ನು ಬೆಳಕಿಗೆ ತಂದಿದೆ ಎಂದು ವಿಶ್ಲೇಷಿಸಿದರು. ಅಲ್ಲದೆ ಇದೇ ಸಂದರ್ಭ ಅವರು ಸಮ್ಮೇಳನ ಯಶಸ್ಸಿಗಾಗಿ ಕೈಜೋಡಿಸಿದ ನಿಡ್ತ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಮಹಿಳೆಯರು, ಜನಪ್ರತಿನಿಧಿಗಳು, ಮತ್ತಿತರರಿಗೆ ಧನ್ಯವಾದ ಸಮರ್ಪಿಸಿದರು.

ವಿಳಾಸ ಸರಿಪಡಿಸಲು ಮನವಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಮಾರು ಮೂರು ಸಾವಿರ ಮಂದಿ ಸದಸ್ಯರಿದ್ದು, ಅನೇಕ ಸದಸ್ಯರ ವಿಳಾಸಗಳು ಬದಲಾಗಿರುವುದರಿಂದ ಪರಿಷತ್ತಿನ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ವಾಪಾಸು ಬರುತ್ತಿವೆ. ಇದರಿಂದ ಅಂಚೆವೆಚ್ಚ ಮತ್ತು ಮುದ್ರಣ ವೆಚ್ಚವೂ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಳಾಸ ಬದಲಾಗಿರುವ ಮತ್ತು ಆಹ್ವಾನ ಪತ್ರ ತಲುಪದೇ ಇರುವ ಸದಸ್ಯರು ತಮ್ಮ ಇತ್ತೀಚಿನ ಅಥವಾ ಶಾಶ್ವತ ವಿಳಾಸವನ್ನು ದೂರವಾಣಿ ಸಂಖ್ಯೆಯೊಂದಿಗೆ ‘ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕಚೇರಿ, ಎಸ್‍ಜಿಎಸ್‍ವೈ ಕಟ್ಟಡ, ಫೀ.ಮಾ.ಕಾರ್ಯಪ್ಪ ವೃತ್ತ, ಮಡಿಕೇರಿ’ ಈ ವಿಳಾಸಕ್ಕೆ ತಾ.28ರ ಒಳಗಾಗಿ ಕಳುಹಿಸುವಂತೆ ಅವರು ಮನವಿ ಮಾಡಿದರು.

ಪರಿಷತ್ತಿನ ಶನಿವಾರಸಂತೆ ಹೋಬಳಿ ಅಧ್ಯಕ್ಷ ಬಿ.ಬಿ.ನಾಗರಾಜ್ ಅವರು ನಿಡ್ತ ಗ್ರಾಮದ ವಿಶೇಷತೆಗಳ ಬಗ್ಗೆ ತಿಳಿಸಿದರು. ಗಡಿ ಭಾಗದಲ್ಲಿದ್ದರೂ, ಈ ಪುಟ್ಟ ಗ್ರಾಮದ ಸರಕಾರಿ ಶಾಲೆಯಲ್ಲಿ ಓದಿದ ಅನೇಕರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾ ನಿರ್ದೇಶಕ ಕೋಡಿ ಚಂದ್ರಶೇಖರ್, ಬಿ.ಎಂ.ಧನಂಜಯ ಹಾಗೂ ಹಿರಿಯ ನಿರ್ದೇಶಕ ಪ್ರಸನ್ನ ಉಪಸ್ಥಿತರಿದ್ದರು.