ಮಡಿಕೇರಿ ಫೆ.14 : ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರಿನ
ಗೆಜ್ಜೆಗಿರಿ ನಂದನ ಬಿತ್ತ್‍ಲ್‍ನಲ್ಲಿ ಜೀರ್ಣೋದ್ಧಾರಗೊಂಡಿರುವ ದೇಯಿ ಬೈದ್ಯತಿ, ಕೋಟಿ-ಚೆನ್ನಯರ ಮೂಲ ಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತಾ.24ರಿಂದ ಆರಂಭವಾಗಲಿದ್ದು, ತಾ.25ರಂದು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಮಡಿಕೇರಿಯ ಬಿಲ್ಲವ ಸೇವಾ ಸಂಘದ ಅಧ್ಯಕ್ಷೆ ಬಿ.ಎಸ್.ಲೀಲಾವತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೊಡಗು ಜಿಲ್ಲೆಯಲ್ಲೂ ಸಾಕಷ್ಟು ಮಂದಿ ಬಿಲ್ಲವ ಸಮುದಾಯದವರಿದ್ದು, ಹೊರೆ ಕಾಣಿಕೆಯನ್ನು ಸ್ವತಃ ಕೊಂಡೊಯ್ಯಲು ಸಾಧ್ಯವಾಗದಿರುವವರು ತಾ. 23 ಮತ್ತು 24ರಂದು ಮಡಿಕೇರಿಯಲ್ಲಿರುವ ಸಂಘದ ಕಚೇರಿಗೆ ತಲುಪಿಸಿದಲ್ಲಿ ತಾ. 25ರಂದು ಹೊರಡುವ ಹೊರೆ ಕಾಣಿಕೊಯೊಂದಿಗೆ ಅದನ್ನು ಶ್ರೀಕ್ಷೇತ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಶ್ರೀಕ್ಷೇತ್ರ ನಂದನ ಬಿತ್ತ್‍ಲ್‍ನಲ್ಲಿ ಈಗಾಗಲೇ ದೇಯಿ ಬೈದ್ಯೆತಿ ಮೂಲಸ್ಥಾನ, ಸಾಯನ ಬೈದ್ಯರ ಗುರು ಪೀಠ, ಧೂಮಾವತಿ ದೈವ, ಕುಪ್ಪೆ ಪಂಜುರ್ಲಿ ಸ್ಥಾನ, ಕೋಟಿ-ಚೆನ್ನಯ ಹಾಗೂ ನಾಗ ಬ್ರಹ್ಮರ ಗುಡಿಗಳು ನಿರ್ಮಾಣವಾಗಿದ್ದು, ಈ ಮೂಲ ಸ್ಥಾನವನ್ನು ಪುನರುತ್ಥಾನ ಮಾಡುವುದರಿಂದ ಸಮಸ್ತ ಬಿಲ್ಲವ ಸಮುದಾಯಕ್ಕೆ ಒಳಿತಾಗಲಿದೆ ಎಂಬ ಅಂಶ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಈ ಕ್ಷೇತ್ರದ ಜೀರ್ಣೋದ್ಧಾರ ಆರಂಭವಾಗಿ, ಇದೀಗ ಮುಕ್ತಾಯದ ಹಂತದಲ್ಲಿದೆ ಎಂದು ಅವರು ತಿಳಿಸಿದರು
ಇದೇ ಸಂದರ್ಭ ಅವರು ದೇಯಿ ಬೈದ್ಯೆತಿ, ಕೋಟಿ ಚೆನ್ನಯ್ಯರ ಹುಟ್ಟಿನ ಬಗೆಗಿನ ಪೌರಾಣಿಕ ಹಿನ್ನೆಲೆಯನ್ನು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ, ಹಾಲಿ ಕಾರ್ಯದರ್ಶಿ ಬಿ.ಅರುಣ್‍ಕುಮಾರ್, ಪ್ರಮುಖರಾದ ಬಿ.ಸಿ.ಸುರೇಶ್‍ಕುಮಾರ್, ಬಿ.ಕೆ.ರಾಜೇಶ್ ಹಾಗೂ ಬಿ.ಆರ್.ಶರತ್ ಉಪಸ್ಥಿತರಿದ್ದರು.