ಕಣಿವೆ, ಫೆ. 14: ತಾಜಾ ತರಕಾರಿ ಗಳನ್ನು ಕಂಡರೆ ಯಾರಿಗೆ ಇಷ್ಟವಾಗಲ್ಲ ಹೇಳಿ? ಅವುಗಳನ್ನು ನೋಡಿದರೆ ಖರೀದಿಸಿ ಮನೆಗೆ ಒಯ್ಯಬೇಕು ಎನಿಸುತ್ತದೆ. ಆದರೆ ಅವುಗಳ ಬೆಲೆಯನ್ನು ಕೇಳಿದರೆ ಮಾತ್ರ ಅಬ್ಬಾ ಅಷ್ಟೊಂದು ಬೆಲೆಯೇ ಎಂದು ಪ್ರಶ್ನಿಸುವವರಿಗೇನು ಬರವಿಲ್ಲ. ಈ ತಾಜಾ ತರಕಾರಿ ಕಾಯಿಪಲ್ಯೆಗಳು ಸಸ್ಯಹಾರಿ ಪ್ರಿಯರಿಗಷ್ಟೇ ಅಲ್ಲ ಮಾಂಸಹಾರಿಗಳಿಗೂ ಕೂಡ ಆಸೆ ಒಡಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿರುವುದೇ ಅವುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ ಈ ತರಕಾರಿ ಕಾಯಿ ಪಲ್ಯೆಗಳ ಬೆಳೆ ಮತ್ತು ಬೆಲೆ ಎರಡು ಕೂಡ ದುಬಾರಿ ಯಾಗಿವೆ. ಅದರಲ್ಲೂ ಸಾವಯವ ತರಕಾರಿ ಕಾಯಿ ಪಲ್ಯೆಗಳಿಗೆ ಮಾರುಕಟ್ಟೆಯಲ್ಲಿ ಪ್ರತ್ಯೇಕವಾದ ಬೆಲೆ ನಿಗದಿಯಾಗಿರುತ್ತದೆ. ಇಂತಹ ಸಾವಯವ ತರಕಾರಿ ಕಾಯಿ ಪಲ್ಯೆಗಳನ್ನು ಕುಶಾಲನಗರದಲ್ಲಿ ದಂಪತಿಗಳಿಬ್ಬರು ಸೇರಿ ಬೆಳೆಯುತ್ತಿದ್ದು ತಾವು ನಿರ್ವಹಿಸುತ್ತಿರುವ ಹೆಣ್ಣು ಮಕ್ಕಳ ವಸತಿ ನಿಲಯದ ಅಡುಗೆಗೆ ಬಳಸುವ ಮೂಲಕ ನಿಲಯದಲ್ಲಿನ ಹೆಣ್ಣು ಮಕ್ಕಳಿಗೆ ತಾಜಾ ತರಕಾರಿಗಳ ಖಾದ್ಯಗಳನ್ನು ಸಿದ್ದಗೊಳಿಸಿ ಮಾದರಿ ಯಾಗಿದ್ದಾರೆ. ಈ ದಂಪತಿಗಳ ಹೆಸರು ಗಣೇಶ್ ಹಾಗೂ ರೂಪ ಗಣೇಶ್. ಇವರು ಬಗೆಬಗೆಯ ಹೂಗಿಡಗಳನ್ನು ಬೆಳೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಮನೆಯಂಗಳದಲ್ಲಿ ಒಂದಷ್ಟು ಜಾಗ ಸಿಕ್ಕರೆ ಸಾಕು ಅಲ್ಲಿ ಯಾವುದಾದರೂ ಹೂ ಬಳ್ಳಿಯನ್ನೋ ಅಥವಾ ಮನೆಯ ಅಡುಗೆಗೆ ಬಳಕೆಯಾಗುವ ತರಕಾರಿ ಗಿಡವನ್ನೋ ಬೆಳೆಯುವುದು ಇವರ ಹವ್ಯಾಸ.
ಅಷ್ಟಕ್ಕೂ ಇವರ ಮನೆಯಂಗಳ ದಲ್ಲಿದ್ದ ಖಾಲಿ ನಿವೇಶನ ಬೇರೆಯವರದ್ದು. ಆ ನಿವೇಶನದಲ್ಲಿ ಕಾಡು ಗಿಡಗಳು ಬೆಳೆದು ಪೊದೆಯ ರೂಪ ತಳೆದಿತ್ತು. ಆ ಪೊದೆಯೊಳಗೆ ಹಾವು, ಹಲ್ಲಿ, ಹೆಗ್ಗಣಗಳು ವಾಸವಾಗಿದ್ದವು. ಇದನ್ನು ಕಂಡ ಇವರು ನಿವೇಶನದ ಮಾಲೀಕರನ್ನು ಸಂಪರ್ಕಿಸಿ ಅದನ್ನು ಸ್ವಚ್ಛಂದ ಮಾಡಿ ತರಕಾರಿ ಬೆಳೆಯುತ್ತೇವೆ ಎಂದು ಹೇಳಿ ಆ ನಿವೇಶನದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಆ ತರಕಾರಿ ಗಿಡಗಳಿಗೆ ಅಪ್ಪಟ ಸಾವಯವ ಗೊಬ್ಬರ ಅಳವಡಿಸಿ ಬೆಳೆಯುತ್ತಿದ್ದಾರೆ. ಈಗ ಅಲ್ಲಿ ಸರಿ ಸುಮಾರು ಹದಿನೈದು ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ಮಣ್ಣಿನ ಒಳಗೆ ಬೆಳೆಯುವ ಮೂಲಂಗಿ, ಆಲುಗೆಡ್ಡೆ, ಬೀಟ್ ರೂಟ್, ಮಣ್ಣಿನ ಮೇಲೆ ಬೆಳೆಯುವ ಬೀನ್ಸ್, ಹಲಸಂದೆ, ಕುಂಬಳಕಾಯಿ, ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ, ಹೂಕೋಸು, ಎಲೆ ಕೋಸು, ನಾಮಧಾರಿ ಜೋಳ, ಹೀಗೆ ಒಂದಲ್ಲ ಎರಡಲ್ಲ ಹಲವು ಮಾದರಿಯ ತರಕಾರಿಗಳನ್ನು ಬೆಳೆದಿದ್ದಾರೆ. ಆ ತರಕಾರಿಗಳಿಗೆ ಯಾವುದೇ ಕೀಟಬಾಧೆ ಬಾಧಿಸದಂತೆ ಚೆಂಡು ಹೂವಿನ ಬಳ್ಳಿಗಳನ್ನು ತರಕಾರಿ ಗಿಡಗಳ ಮಧ್ಯೆ ಬೆಳೆಸಿದ್ದಾರೆ.
ತರಕಾರಿ ಬೆಳೆಯ ಕೃಷಿ ಮಾಡುತ್ತಿರುವ ಈ ದಂಪತಿಗಳು ತಮ್ಮ ಕೈತೋಟದಲ್ಲಿ ಕ್ಯಾನ್ಸರ್ ನಿವಾರಕ ಗೊಮಟೆ ಹಣ್ಣಿನ ಗಿಡವನ್ನು ಕೂಡ ತಂದು ನೆಟ್ಟು ಬೆಳೆಸಿದ್ದಾರೆ. ಈ ಗಿಡಕ್ಕೆ ತುಂಬಾ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಈ ಗಿಡವನ್ನೇ ಹೆಚ್ಚು ಬೆಳೆಸಿ ನೆರೆಹೊರೆಯವರಿಗೆ, ಆಪ್ತರಿಗೆ, ನೆಂಟರಿಷ್ಟರಿಗೆ ವಿತರಿಸುವ ಬಗ್ಗೆಯೂ ಯೋಜನೆ ಹೊಂದಿರುವುದಾಗಿ ರೂಪ ಗಣೇಶ್ ತಿಳಿಸಿದ್ದಾರೆ. ಮನೆಯೊಳಗೆ ಅಡುಗೆ ಹಾಗೂ ಇತರ ಕೆಲಸ ಮಾಡಿ ಬಸವಳಿದಾಗ ತರಕಾರಿ ಗಿಡಗಳ ಕಡೆ ಕಣ್ಣು ಹೊರಳಿಸಿದರೆ ಎಲ್ಲಾ ಆಯಾಸವೂ ನಿವಾರಣೆಯಾಗುತ್ತದೆ. ಅಂದ ಚೆಂದವಾಗಿ ದಿನದಿಂದ ದಿನಕ್ಕೂ ಬದಲಾಗಿ ಬೆಳೆಯುವ ತರಕಾರಿ ಸೊಪ್ಪುಗಳ ಗಿಡಗಳಿಗೆ ನೀರುಣಿಸುತ್ತಾ ಅವುಗಳ ಬುಡದೊಳಗೆ ಕೈಯಾಡಿಸುತ್ತಾ ಇದ್ದರೆ ಅದರಿಂದ ಸಿಗುವ ಆನಂದಕ್ಕೆ ಪಾರವೇ ಇಲ್ಲ ಎನ್ನುತ್ತಾರೆ ರೂಪ ಗಣೇಶ್. ನಾವು ಖುದ್ದಾಗಿ ಬೆಳೆದ ಸಾವಯವ ತಾಜಾ ತರಕಾರಿಗಳನ್ನು ನೇರವಾಗಿ ಬಳ್ಳಿಯಿಂದ ಬಾಣಲೆಗೆ ತಂದು ಬೇಯಿಸಿ ಮಸಾಲೆಭರಿತ ಖಾದ್ಯವಾಗಿ ಸಿದ್ಧಪಡಿಸುವ ಕಾರಣ ಈ ದಂಪತಿಗಳು ನಿರ್ವಹಿಸುತ್ತಿರುವ ಹೆಣ್ಣು ಮಕ್ಕಳ ಮಿನಿ ವಸತಿ ನಿಲಯದಲ್ಲಿನ ಯುವತಿಯರು ಸಂತಸದಿಂದ ಆರೋಗ್ಯ ವರ್ಧಕ ತರಕಾರಿಗಳನ್ನು ಮೆಲ್ಲುತ್ತಿದ್ದಾರೆ.
ನಾವು ಯಾವುದೇ ತರಕಾರಿ ಸೊಪ್ಪುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುವ ಪರಿಪಾಠವೇ ಇಲ್ಲ. ನಮಗೆ ಅವಶ್ಯ ಇರುವ ದಿನಬಳಕೆಯ ಎಲ್ಲವನ್ನೂ ಸ್ವತಃ ನಾವೇ ಬೆಳೆಯುತ್ತೇವೆ ಎನ್ನುವ ಗಣೇಶ್ ಅವರ ಕೈತೋಟ ಇಡೀ ಬಡಾವಣೆಗೆ ಮಾದರಿಯಾಗಿದೆ. ಮನೆಯಂಗಳದಲ್ಲಿ ತರಕಾರಿಗಳ ಕೈತೋಟ ಮಾಡಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗೆ ರೂಪ ಗಣೇಶ್ ಮೊ. 9901423588 ಅನ್ನು ಸಂಪರ್ಕಿಸಬಹುದು.
- ಕೆ.ಎಸ್. ಮೂರ್ತಿ