ಸೋಮವಾರಪೇಟೆ, ಫೆ. 14: ಸಮೀಪದ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ತಾ. 20 ಮತ್ತು 21 ರಂದು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಎ.ವಿ. ವಿಶ್ವರೂಪಾಚಾರ್ಯ ತಿಳಿಸಿದ್ದಾರೆ.
ತಾ. 20 ರಂದು ಬೆಳಿಗ್ಗೆ 10ಕ್ಕೆ ದೇವಾಲಯದ ಆವರಣದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ವಿ. ನಾಗರತ್ನ ವೆಂಕಟಪ್ಪ ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ. ನಂತರ ರಾಸುಗಳ ಚಿಕಿತ್ಸಾ ಶಿಬಿರ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ನಡೆಯಲಿದೆ.
ತಾ. 21 ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹೆಚ್.ಆರ್. ಮುತ್ತಣ್ಣ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಪ್ಪಚ್ಚು ರಂಜನ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ಕುಸುಮಾ ಅಶ್ವಥ್, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ಎಸ್.ಡಿ. ದಿವಾಕರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್ ಸುರೇಶ್, ನಿರ್ದೇಶಕ ಎಸ್.ಬಿ. ಭರತ್‍ಕುಮಾರ್, ಸಮುದಾಯ ಭವನ ಸಮಿತಿ ಅಧ್ಯಕ್ಷ ಜಿ.ಎ. ಮಹೇಶ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.
ಜಾತ್ರೋತ್ಸವದ ಪ್ರಯುಕ್ತ ಬೀಟಿಕಟ್ಟೆಯ ಯೂತ್ ಕ್ಲಬ್ ವತಿಯಿಂದ ಬಿಜಿಎಸ್ ಶಾಲಾ ಮೈದಾನದಲ್ಲಿ ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯವರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ, ಗುಡ್ಡಗಾಡು ಓಟದ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಬಸ್ ಹುಡುಕಾಟ ಸ್ಪರ್ಧೆ ನಡೆಯಲಿದೆ. 16 ವರ್ಷ ವಯೋಮಾನದೊಳಗಿನವರಿಗೆ ಭಕ್ತಿಗೀತೆ ಮತ್ತು ಭಾವಗೀತೆ ಸ್ಪರ್ಧೆ, ಸಾರ್ವಜನಿಕರಿಗೆ ಜನಪದ ಗೀತೆ ಗಾಯನ, ನಿಧಾನವಾಗಿ ಬೈಕ್ ಮತ್ತು ಸೈಕಲ್ ಚಾಲಿಸುವ ಸ್ಪರ್ಧೆ ಸೇರಿದಂತೆ ಇತರ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ.
ತಾ. 21 ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ರಾತ್ರಿ 10ಕ್ಕೆ ಶ್ರೀ ದೇವಿ ಮಹಾತ್ಮೆ ಎಂಬ ಕಥಾ ಹಂದರವನ್ನು ಒಳಗೊಂಡ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ ಎಂದು ವಿಶ್ವರೂಪಾಚಾರ್ಯ ತಿಳಿಸಿದ್ದಾರೆ.