ಕುಶಾಲನಗರ, ಫೆ. 14: ಮಾನವನಿಗೆ ಕಾಡುವ ಸಹಜ ಕಾಯಿಲೆಗಳಿಗೆ ಔಷಧಿ ಸೇವಿಸದೆಯೇ ಆಕ್ಯುಪ್ರೆಷರ್ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ರಾಜಸ್ಥಾನ ಜೋದಪುರದ ಅಕ್ಯುಪ್ರೆಷರ್ ತರಬೇತಿ ಹಾಗೂ ಸಂಶೋಧನಾ ಶಿಕ್ಷಣ ಸಂಸ್ಥೆಯ ಆಕ್ಯುಪ್ರೆಷರ್ ಮತ್ತು ಸುಜೋಕ್ ತಜ್ಞ ಡಾ. ಆರ್.ಪಿ. ಭಟಿ ತಿಳಿಸಿದರು.
ಕುಶಾಲನಗರ ರೋಟರಿ ಸಂಸ್ಥೆ ಹಾಗೂ ರಾಜಸ್ಥಾನ ಜೋದಪುರ ಅಕ್ಯುಪ್ರೆಷರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ ರೋಟರಿ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ವಾರಗಳ ಕಾಲದ ‘ಆಕ್ಯುಪ್ರೆಷರ್ ಮತ್ತು ಸುಜೋಕ್’ ಕುರಿತ ಕಾರ್ಯಾಗಾರ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಲೆನೋವು, ಕಣ್ಣುಬೇನೆ, ಜ್ವರ, ಪಿತ್ತ, ಒತ್ತಡ, ಮಂಡಿ ನೋವು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಅಂಗೈಯಲ್ಲಿರುವ ಆಕ್ಯುಪ್ರೆಷರ್ಗಳನ್ನು ಸರಿಯಾದ ತಂತ್ರದಿಂದ ಒತ್ತುವ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು.
ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಭಟಿ ಸಲಹೆ ನೀಡಿದರು.
ಕಾರ್ಯಕ್ರಮ ಸಂಯೋಜಕ ಹಿರಿಯ ರೋಟರಿ ಸದಸ್ಯ ಎಸ್.ಕೆ. ಸತೀಶ್ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವಾರಗಳ ಕಾಲ ನಡೆಯುವ ಆಕ್ಯುಪ್ರೆಷರ್ ಚಿಕಿತ್ಸಾ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಹಾಯಕ ರೋಟರಿ ಗೌರ್ನರ್ ಪಿ. ನಾಗೇಶ್, ರೋಟರಿ ಮಾಜಿ ಅಧ್ಯಕ್ಷ ಪ್ರಕಾಶ್, ನಿಯೋಜಿತ ಅಧ್ಯಕ್ಷ ಚಂದ್ರಶೇಖರ್, ಸಂಜು ಬೆಳ್ಳಿಯಪ್ಪ, ಸದಸ್ಯರಾದ ಶೋಭಾ ಸತೀಶ್ ಉಪಸ್ಥಿತರಿದ್ದರು.