ಗೋಣಿಕೊಪ್ಪ ವರದಿ, ಫೆ. 13: ಜಿಲ್ಲೆಯ ದಕ್ಷಿಣ ಭಾಗದಲ್ಲಿ ನಡೆದ ಪ್ರತ್ಯೇಕ ಹುಲಿ ದಾಳಿ ಪ್ರಕರಣದಲ್ಲಿ ಎರಡು ಹಸು ಸಾವನಪ್ಪಿರುವ ಘಟನೆಗಳು ನಡೆದಿವೆ. ನಾಲ್ಕೇರಿ ಗ್ರಾಮದ ಮುಕ್ಕಾಟೀರ ಕುಮುದಾ ಹಾಗೂ ಮಾಯಮುಡಿ ಗ್ರಾಮದ ಚೆಪ್ಪುಡೀರ ಮುದ್ದುರಾಜ್ ಎಂಬುವವರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ನಾಲ್ಕೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು ಕಾಲ್ಕಿತ್ತಿದೆ. 2 ದಿನಗಳ ಹಿಂದೆಯಷ್ಟೆ ಇಲ್ಲಿ ಹುಲಿ ಹಸುವನ್ನು ಕೊಂದು ಹಾಕಿತ್ತು. ಸಮೀಪದಲ್ಲಿ ಮತ್ತೊಂದು ಬೆಳೆಗಾರನ ಹಸುವಿನ ಮೇಲೂ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ಇದೀಗ ಮತ್ತೊಂದು ದಾಳಿ ನಡೆದಿರುವುದು ಭಯ ಮೂಡಿಸಿದೆ. (ಮೊದಲ ಪುಟದಿಂದ) 2ನೇ ಪ್ರಕರಣದಲ್ಲಿ ಮಾಯಮುಡಿಯ ಕಲ್ತೋಡು ಎಂಬಲ್ಲಿ ಬುಧವಾರ ರಾತ್ರಿ ನಡೆದ ದಾಳಿಯಿಂದ ಚೆಪ್ಪುಡೀರ ಮುದ್ದುರಾಜ್ ಎಂಬವರಿಗೆ ಸೇರಿದ ಹಸು ಸಾವನಪ್ಪಿದೆ. ಮೇಯಲು ಬಿಟ್ಟಿದ್ದ ಹಸು ರಾತ್ರಿ ಕೂಡ ಕೊಟ್ಟಿಗೆಗೆ ಬಂದಿರಲಿಲ್ಲ. ಇದರಿಂದ ಬೆಳಿಗ್ಗೆ ತೋಟದಲ್ಲಿ ಹುಡುಕುವಾಗ ಹಸುವಿನ ಕಳೇಬರ ಪತ್ತೆಯಾಗಿದೆ. ಸುಮಾರು 8 ಲೀಟರ್ ಹಾಲು ನೀಡುತ್ತಿದ್ದ ಹಸುವಿನ ಸಾವಿನಿಂದ ರೂ. 45 ಸಾವಿರಕ್ಕೂ ಅಧಿಕ ನಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಆಕ್ರೋಶಗೊಂಡ ಬೆಳೆಗಾರ ಚೆಪ್ಪುಡೀರ ಮುದ್ದುರಾಜ್, ಕಾಳಪಂಡ ಸುದೀರ್ ಹಾಗೂ ಜಿ. ಪಂ. ಸದಸ್ಯ ಬಾನಂಡ ಪ್ರಥ್ಯು ಮತ್ತಿಗೋಡು ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ ಹುಲಿ ಸೆರೆಗೆ ಆಗ್ರಹಿಸಿದರು. ಕೂಂಬಿಂಗ್ ಕಾರ್ಯ ನಡೆಸುವುದಾಗಿ ವಲಯ ಅಧಿಕಾರಿ ಶಿವಾನಂದ್, ತಿತಿಮತಿ ಸಾಮಾಜಿಕ ಅರಣ್ಯ ವಲಯಾಧಿಕಾರಿ ಅಶೋಕ್ ಭರವಸೆ ನೀಡಿದರು. ಗುರುವಾರ ಕ್ಯಾಮೆರ ಅಳವಡಿಸಿ ಪತ್ತೆ ಕಾರ್ಯ ನಡೆಸಿ, ನಂತರ ಬೋನ್ ಇಡುವ ಯೋಜನೆ ರೂಪಿಸುವುದಾಗಿ ಅವರು ತಿಳಿಸಿದರು.
ಮತ್ತೊಂದು ಪ್ರಕರಣದಲ್ಲಿ
ಕೊಟ್ಟಗೇರಿ ಗ್ರಾಮದ ತಿರುನೆಲ್ಲಿಮಾಡ ಪಿ ತಮ್ಮಯ್ಯ ಅವರ ಗಬ್ಬದ ಹಸು ನಾಲ್ಕು ದಿವಸದಿಂದ ಕಾಣೆಯಾಗಿದ್ದು ಇಂದು ಸಂಜೆ 4.30 ವೇಳೆಯಲ್ಲಿ ಕಳೇಬರ ಪತ್ತೆ ಆಗಿದೆ. ಹುಲಿಯ ಅಟ್ಟಹಾಸಕ್ಕೆ ಹಸು ಬಲಿಯಾಗಿದ್ದು ತಿಳಿದಿರುತ್ತದೆ ನಂತರ ಕೊಟ್ಟಗೇರಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
- ಸುದ್ದಿಮನೆ/ ಹರ್ಷಿತ್ ಪೂವಯ್ಯ