ಮಡಿಕೇರಿ, ಫೆ. 13: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿ ಉಂಟಾಗಿರುವ; ಪ್ರವಾಹ ಪೀಡಿತ ಪ್ರದೇಶದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ; ಗ್ರಾಮೀಣ ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು; ತಮ್ಮ ಕೋರಿಕೆಗೆ ಸ್ಪಂದಿಸಿ ರೂ. 4 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು; ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ಗಮನ ಸೆಳೆದಿದ್ದೆ; ತಕ್ಷಣ ಸ್ಪಂದಿಸಿದ ಅವರು ಕೊಡಗಿನ ಬಗ್ಗೆ ಕಾಳಜಿಯೊಂದಿಗೆ ಅನುದಾನ ಒದಗಿಸಿರುವದಾಗಿ ಮಾರ್ನುಡಿದರು.ಕೊಡಗು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ರೂ. 4 ಕೋಟಿ ವೆಚ್ಚದಲ್ಲಿ ವಿವಿಧೆಡೆಗಳಲ್ಲಿ ಗ್ರಾಮೀಣ ರಸ್ತೆಗಳನ್ನು 81 ಕಡೆಗಳಲ್ಲಿ ಅಭಿವೃದ್ಧಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು. ಈ ಪೈಕಿ ಕಳೆದ ವರ್ಷ ಸಾಕಷ್ಟು ಹಾನಿ ಉಂಟಾಗಿರುವ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 65 ಲಕ್ಷ
(ಮೊದಲ ಪುಟದಿಂದ) ಮೊತ್ತದೊಂದಿಗೆ 14 ರಸ್ತೆ ಕಾಮಗಾರಿಗಳಿಗೆ ತಲಾ ರೂ. 5 ಲಕ್ಷದಂತೆ ಹಣ ಹಂಚಿಕೆ ಮಾಡಿರು ವದಾಗಿ ವಿವರಿಸಿದ ಅವರು; ಆ ಭಾಗದ ಜನತೆ ಕೆಲಸದ ಗುಣಮಟ್ಟ ನೋಡಿಕೊಳ್ಳುವಂತೆ ಸಲಹೆಯಿತ್ತರು.ಇನ್ನುಳಿದಂತೆ ಮದೆನಾಡು, ಕಾಂತೂರು ಮೂರ್ನಾಡು, ಗಾಳಿಬೀಡು, ಬೆಟ್ಟಗೇರಿ, ಹೊದ್ದೂರು, ಕುಂಜಿಲ, ಕಕ್ಕಬ್ಬೆ, ಬೇಂಗೂರು, ಕರ್ಣಂಗೇರಿ, ಮಕ್ಕಂದೂರು, ಕಡಗದಾಳು, ಹಾಕತ್ತೂರು, ಕೆ. ನಿಡುಗಣೆ ಮುಂತಾದೆಡೆ ರಸ್ತೆಗಳಿಗೆ ಹಣ ಹಂಚಿಕೆ ಮಾಡಲಾಗಿದೆ ಎಂದರು. ಮುಂದುವರಿದು ನರಿಯಂದಡ, ಬಲ್ಲಮಾವಟಿ, ನಾಪೋಕ್ಲು, ಸಂಪಾಜೆ, ಚೆಂಬು, ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಗಳಿಗೆ; ತಲಾ ರೂ. 4 ರಿಂದ 5 ಲಕ್ಷದಷ್ಟು ತುರ್ತು ರಿಪೇರಿ ಕೆಲಸಗಳಿಗೆ ಹಣ ಬಿಡುಗಡೆಯೊಂದಿಗೆ ಜನತೆಗೆ ಅನುಕೂಲ ಕಲ್ಪಿಸುವ ಇಂಗಿತ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೊಡ್ಲಿಪೇಟೆ, ಶನಿವಾರಸಂತೆ, ಚೆಟ್ಟಳ್ಳಿ, ಕೆದಕಲ್, ವಾಲ್ನೂರು ತ್ಯಾಗತ್ತೂರು ಮೊದ ಲಾದೆಡೆಗಳಲ್ಲಿ ಹಳ್ಳಿ ರಸ್ತೆಗಳ ಅಭಿವೃದ್ಧಿ ಮೂಲಕ ರಸ್ತೆ ಸಂಪರ್ಕಕ್ಕೆ ಸಲಹೆ ಮಾಡಿರುವದಾಗಿ ಅವರು ಹೇಳಿದರು.
ವೀರಾಜಪೇಟೆ ತಾಲೂಕಿನಲ್ಲಿ ಕಾಕೋಟು ಪರಂಬು, ಹುದಿಕೇರಿ, ಪೊನ್ನಂಪೇಟೆ, ನಿಟ್ಟೂರು, ಕಾರ್ಮಾಡು, ಬಿಳುಗುಂದ, ಪೊನ್ನಪ್ಪಸಂತೆ, ಕಣ್ಣಂಗಾಲ, ಕೆದಮುಳ್ಳೂರು, ಬಿಟ್ಟಂಗಾಲ, ದೇವರಪುರ, ಚೆಂಬೆಬೆಳ್ಳೂರು, ಚೆನ್ನಯನಕೋಟೆ, ಪಾಲಿಬೆಟ್ಟ, ಕುಟ್ಟ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಅನುದಾನ ಹಂಚಿಕೆ ಮಾಡಿರುವದಾಗಿ ವಿವರಿಸಿದರು.